ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ
– ಸಿಎಂ ಯೋಗಿ ಆದಿತ್ಯನಾಥ್ ಗೆ ಬಾಂಬ್ ಬೆದರಿಕೆ ಇ-ಮೇಲ್.!
-ಯುಪಿ ಪೊಲೀಸರಿಂದ ತನಿಖೆ!
NAMMUR EXPRESS NEWS
ನವದೆಹಲಿ: ಇನ್ನೇನು ಕೆಲ ದಿನಗಳಲ್ಲಿಯೇ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ಒಂದು ಸಂದೇಶವುಳ್ಳ ಇ-ಮೇಲ್ ಆತಂಕ ಸೃಷ್ಟಿಸುವಂತೆ ಮಾಡಿದೆ. ಹೌದು, ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ದಾಳಿ ಮೂಲಕ ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಒಂದು ಬಂದಿದೆ. ಈ ಸಂದೇಶದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್ಟಿಎಫ್ ಎಡಿಜಿ ಅಮಿತಾಬ್ ಯಶ್ ಅವರ ಬಗ್ಗೆಯೂ ಬರೆಯಲಾಗಿದೆ. ಇ-ಮೇಲ್ ಕಳುಹಿಸಿದ ವ್ಯಕ್ತಿ ತನಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಜೊತೆ ಸಂಬಂಧ ಇದೆ ಎಂದೂ ತಿಳಿಸಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಯುಪಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಆಕ್ಷೇಪಾರ್ಹ ಭಾಷೆಯನ್ನು ಬಳಸಿ ಭಾರತೀಯ ಕಿಸಾನ್ ಮಂಚ್ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ರವಾನಿದ್ದಾನೆ. ಇನ್ನು ಇ-ಮೇಲ್ ಕಳುಹಿಸಿದ ವ್ಯಕ್ತಿ ತನ್ನನ್ನು ಜುಬೈರ್ ಹುಸೇನ್ ಖಾನ್ ಎಂದು ಹೇಳಿಕೊಂಡಿದ್ದು, ಐಎಸ್ಐ ಜತೆಗೂ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ದೇವೇಂದ್ರ ತಿವಾರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆಯೂ ಸಹ ಇಂತಹ ಬೆದರಿಕೆ ಮೇಲ್ ಬಂದಿರುವುದಾಗಿ ತಿವಾರಿ ತಿಳಿಸಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಡಿಜಿ ಅಮಿತಾಬ ಯಶ್ ಹಾಗೂ ದೇವೇಂದ್ರ ತಿವಾರಿ ಅವರನ್ನು ಬೆದರಿಕೆ ಇ-ಮೇಲ್ನಲ್ಲಿ ಗೋಸೇವಕರು ಎಂದು ಬರೆದುಕೊಂಡಿದ್ದಾನೆ. ಬೆದರಿಕೆಯ ಇ-ಮೇಲ್ ಸಂದೇಶ ಕಳೆದ 2 ದಿನದ ಹಿಂದೆ ದೇವೇಂದ್ರ ಅವರ ಮೇಲ್ ಐಡಿಗೆ ಬಂದಿದೆ. ಉಳಿದ ಮಾಹಿತಿಗಳು ತನಿಖೆಯ ನಂತರವೇ ಲಭ್ಯವಾಗಬೇಕಿದೆ.