ಕೇಂದ್ರದಿಂದಲೂ ಜನತೆಗೆ ಭರ್ಜರಿ ಯೋಜನೆ!
– ಕೇಂದ್ರ ಬಜೆಟ್: ಮಹಿಳೆಯರಿಗೆ ಬಂಪರ್ ಯೋಜನೆ
– ಮನೆ ಇಲ್ಲದವರಿಗೆ 2 ಕೋಟಿ ಮನೆ ನಿರ್ಮಾಣ
– ಮಹಿಳೆಯರಿಗೆ ಸಾಲ: ರೈತರಿಗೆ ವಿಮೆ
NAMMUR EXPRESS NEWS
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2024 ಮಂಡಿಸಿದ್ದಾರೆ.
2 ಕೋಟಿ ಬಡವರಿಗೆ ಮನೆ
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ 2 ಕೋಟಿ ಮನೆ ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. “ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಇನ್ನೂ 2 ಕೋಟಿ ಮನೆ ನಿರ್ಮಿಸಲಾಗುತ್ತದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕೃಷಿ ಕ್ಷೇತ್ರಕ್ಕೆ ಕೊಡುಗೆ
ಸುಗ್ಗಿಯ ನಂತರದ ಚಟುವಟಿಕೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಹೂಡಿಕೆ, ಹೈನುಗಾರರಿಗೆ ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ತಿಳಿಸಿದೆ. ಕಾಲು ಬಾಯಿ ರೋಗವನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನ, ಪಿಎಂ ಫಸಲ್ ಬಿಮಾ ಅಡಿಯಲ್ಲಿ 4 ಕೋಟಿ ರೈತರಿಗೆ ಬೆಳೆ ವಿಮೆ, ಐದು ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪನೆ, ಜಲಕೃಷಿಯನ್ನು ಉತ್ತೇಜಿಸಲು ಬ್ಲೂ ಎಕಾನಮಿ 2.0 ಅನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೋಟಿ ಮನೆಗಳಿಗೆ ವಿದ್ಯುತ್ ಉಚಿತ
ದೇಶದ ಒಂದು ಕೋಟಿ ಮನೆಗಳ ಚಾವಣಿ ಮೇಲೆ ಉಚಿತವಾಗಿ ಸೋಲಾರ್ ಅಳವಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಿಂದ ಮಾಸಿಕ 300 ಯುನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು, ಜನರಿಗೆ ಉಚಿತವಾಗಿ ವಿದ್ಯುತ್ ಲಭ್ಯವಾಗಿದೆ. ಹಾಗೆಯೇ, “ಬಳಕೆಯಾಗದ ವಿದ್ಯುತ್ಅನ್ನು ಸರ್ಕಾರಕ್ಕೆ ಮಾರಾಟ ಮಾಡಿ ಹಣ ಗಳಿಸಬಹುದು” ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಬಾಲಕಿಯರಿಗೆ ಉಚಿತ ಲಸಿಕೆ
ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈಗ ಗರ್ಭಕಂಠ ಕ್ಯಾನ್ಸರ್ ನಿರೋಧಕ ವ್ಯಾಕ್ಸಿನ್ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ.
ಜನಸಾಮಾನ್ಯರಿಗೆ ಮತ್ತಷ್ಟು ಯೋಜನೆಗಳು
ಸ್ಕಿಲ್ ಇಂಡಿಯಾ ಮಿಷನ್ ಯೋಜನೆ ಅಡಿಯಲ್ಲಿ 1.4 ಕೋಟಿ ಯುವಕರಿಗೆ ಉದ್ಯೋಗ ತರಬೇತಿ.44 ಸಾವಿರ ರೈಲು ಬೋಗಿಗಳನ್ನು ವಂದೇ ಭಾರತ್ ರೈಲು ಬೋಗಿ ರೀತಿ ಮೇಲ್ದರ್ಜೆಗೇರಿಸುವುದು. ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ 78 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸು ನೆರವು. ಲಕ್ಪತಿ ದೀದಿʼಯ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸುವುದು. ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಕಾರ್ಯಕ್ರಮ ಮೂಲಕ ಪೌಷ್ಟಿಕಾಂಶ, ಬಾಲ್ಯದ ಆರೈಕೆ ವೃದ್ಧಿ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೂ ಆಯುಷ್ಮಾನ್ ಭಾರತ್ ಯೋಜನೆ ಅನ್ವಯ. ಎಲ್ಲ ಜಿಲ್ಲೆಗಳಲ್ಲೂ ಇನ್ನೂ ಹೆಚ್ಚಿನ ಸರ್ಕಾರಿ ಆಸ್ಪತ್ರೆ ಸ್ಥಾಪನೆ, ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಕ್ರಮ.