ದೇಶದೆಲ್ಲೆಡೆ ಮಕ್ಕಳ ದಿನಾಚರಣೆ ಸಂಭ್ರಮ!
– ಮಕ್ಕಳ ವಿವಿಧ ಕಾರ್ಯಕ್ರಮ: ಏನಿದು ಮಕ್ಕಳ ದಿನಾಚರಣೆ
– ಭಾರತದ ಮೊದಲ ಪ್ರಧಾನಿ ನೆಹರೂ ಜನ್ಮ ದಿನ ಮಕ್ಕಳ ದಿನ ಆಗಿದ್ದು ಹೇಗೆ?
NAMMUR EXPRESS NEWS
ಬದುಕು ಎಂದರೆ ಏನು ಎಂಬ ಅರಿವೇ ಇಲ್ಲದೇ, ತಮ್ಮದೇ ಲೋಕದಲ್ಲಿ ಮುಳುಗಿ ಆಟ, ಪಾಠವ ಕಲಿಯುತ್ತಾ, ಶಾಲಾ ಸಮವಸ್ತ್ರದ ಬದಲು ಬಣ್ಣದ ಬಟ್ಟೆಯನ್ನು ತೊಟ್ಟು , ಶಾಲೆಯಲ್ಲಿ ಭಾಷಣದ ನಂತರ ಕೊಡುವ ಸಿಹಿ ತಿನಿಸುಗಾಗಿ ಕಾಯುವ ಆ ಕ್ಷಣಗಳು ಅವಿಸ್ಮರಣೀಯವಲ್ಲವೇ..?
ಆದುದರಿಂದ ಮಕ್ಕಳ ದಿನಾಚರಣೆ ಮಕ್ಕಳಿಗೆ ಹೇಗೆ ವಿಶೇಷವೋ ಹಾಗೇ ಅಂದಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಮಕ್ಕಳ ದಿನಾಚರಣೆ ದೊಡ್ಡವರಿಗೂ ಒಂದು ಸುಂದರ ಅವಕಾಶವಾಗಿದೆ.
ಇಂದಿನ ಮಕ್ಕಳು ನಾಳಿನ ಭಾರತವನ್ನು ರೂಪಿಸುತ್ತಾರೆ. ನಾವು ಅವುಗಳನ್ನು ಪೋಷಿಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಜವಾಹರಲಾಲ್ ನೆಹರು ರವರ ನುಡಿ ಅರ್ಥಗರ್ಭಿತವಾದದ್ದು.
ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ 1964 ರ ನಂತರ ಭಾರತದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ 14 ರಂದು ಆಚರಣೆ ಆಗುತ್ತಿದೆ.
ಒಮ್ಮೆ ಜವಾಹರಲಾಲ್ ನೆಹರುರವರ ಅನುಯಾಯಿಗಳು ಅವರ ಜನ್ಮದಿನವನ್ನು ಅವರ ಹುಟ್ಟಿದ ದಿನವನ್ನಾಗಿ ಆಚರಿಸುತ್ತೇವೆ ಎಂದು ಕೇಳಿದಾಗ , ನೆಹರುರವರು ಗೌರವದಿಂದ ಅವರ ಮಾತು ಆಲಿಸಿದರು. ನಂತರ , “ಮಕ್ಕಳು ತೋಟದಲ್ಲಿ ಅರಳುವ ಸುಂದರ ಹೂವುಗಳು, ತಾನೂ ಬಿದ್ದು ಹೋಗುವ ಮರ”. ಆದುದರಿಂದ ತಾನು ಹುಟ್ಟಿದ ದಿನವನ್ನು ತನ್ನ ದಿನಾಚರಣೆಯನ್ನಾಗಿ ಅಚರಿಸುವ ಬದಲು ಮಕ್ಕಳ ದಿನವನ್ನಾಗಿ ಆಚರಿಸಿ,ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂಬ ಕರೆಯನ್ನು ನೆಹರು ನೀಡುತ್ತಾರೆ. ಇದು ನೆಹರು ಅವರಿಗೆ ಮಕ್ಕಳ ಕುರಿತ ಪ್ರೇಮ ಮತ್ತು ಮಕ್ಕಳ ಮುಂದಿನ ನಾಯಕತ್ವದ ಪ್ರತೀಕವಾಗಿ ಉಳಿಯಿತು.
ಅಂದಿನಿಂದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಎಂದು ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ.
ಗಿಡಗಳಿಗೆ ಚೆನ್ನಾಗಿ ಎಷ್ಟು ಬೇಕೋ ಅಷ್ಟು ನೀರು, ಗೊಬ್ಬರ ಹಾಕಿ ಬೆಳೆಸಿದಾಗ ಮಾತ್ರ ಪರಿಮಳ ಬೀರುವ ಸುಂದರ ಹೂವುಗಳು ಅರಳುತ್ತವೆ. ಅಂತೆಯೇ ಮುಗ್ಧ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಶಿಕ್ಷಣವನ್ನು ಪೂರೈಸಬೇಕೆಂದು ನೆಹರೂ ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದು ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಮಕ್ಕಳ ದಿನಾಚರಣೆಯನ್ನ ಪ್ರತೀ ವರ್ಷವೂ ಶಾಲೆಗಳಲ್ಲಿ ಆಚರಿಸಿ ಚಾಕೋಲೇಟ್, ಸಿಹಿ ತಿನಿಸು ನೀಡಿ, ಮಕ್ಕಳಿಗೆ ಶುಭಾಶಯ ತಿಳಿಸಿ, ಜತೆಗೆ ಈ ದಿನದ ಮಹತ್ವವನ್ನು ಸಹ ತಿಳಿಸಲಾಗುತ್ತದೆ. ಶಿಕ್ಷಕರು ಮಾತ್ರವಲ್ಲದೇ ಮಕ್ಕಳಿಗೂ ಸಹ ಈ ದಿನದ ಬಗ್ಗೆ ಮಾತನಾಡಲು ಶಾಲೆಗಳಲ್ಲಿ ಅವಕಾಶ ನೀಡಲಾಗುತ್ತದೆ. ಒಂದು ರೀತಿಯಲ್ಲಿ ಒಂದು ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವೇ ಮಕ್ಕಳಿಗಾಗಿ ಏರ್ಪಟ್ಟಿರುತ್ತದೆ.
ಈ ದಿನದಂದು, ಶಾಲೆಗಳು ಮತ್ತು ಸಂಸ್ಥೆಗಳು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತವೆ. ಪೋಷಕರು ಮತ್ತು ಶಿಕ್ಷಕರಿಗೆ ಮಕ್ಕಳಲ್ಲಿ ಅಡಕ ವಾಗಿರುವ ಪ್ರತಿಭೆಯನ್ನು ಹೊರಗೆಳೆಯಲು ಮತ್ತು ಅವರ ಪ್ರಗತಿಯನ್ನು ಪ್ರತಿಬಿಂಬಿಸಲು ಸಹಕಾರಿಯಾಗಿದೆ.
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದು ಜವಾಹರಲಾಲ್ ನೆಹರು ರವರು. ಅವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ನೆಹರು ರವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಎಲ್ಲಾ ಮಕ್ಕಳಿಗೆ ಮಕ್ಕಳ ದಿನದ ಶುಭಾಶಯಗಳು
ಮಕ್ಕಳ ಆಟ ಚಂದ.. ಮಕ್ಕಳ ಮಾತು ಚಂದ
ಮಕ್ಕಳನ್ನು ಆದಷ್ಟು ಮೊಬೈಲ್ ಇಂದ ದೂರವಿರಿಸಿ.
ಸಂಸ್ಕೃತಿ.. ಸಂಪ್ರದಾಯ.. ಬದುಕೋದನ್ನು ಕಲಿಸಿ