ಒಂದೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ?
– ಕೇಂದ್ರ ಮಹತ್ವದ ಘೋಷಣೆ: ಒಂದೇ ವಾರದಲ್ಲಿ ಜಾರಿ?
– ಸಿಎಎ ಜಾರಿ ತಡೆಯಲು ಸಾಧ್ಯವಿಲ್ಲ ಎಂದ ಅಮಿತ್ ಶಾ!
NAMMUR EXPRESS NEWS
ಲೋಕಸಭೆ ಚುನಾವಣೆಯ ನಂತರವೇ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುತ್ತದೆ ಎಂಬ ಚರ್ಚೆ ನಡುವೆ ಕೇಂದ್ರ ಸಚಿವ ಶಂತನು ಠಾಕೂರ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ದೇಶಾದ್ಯಂತ 7 ದಿನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ” ಎಂದು ಹೇಳಿದ್ದಾರೆ. ಇವರ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಂತನು ಠಾಕೂರ್, ಸಿಎಎ ಕುರಿತು ಮಹತ್ವದ ಹೇಳಿಕೆ ನೀಡಿದರು.
“ಪಶ್ಚಿಮ ಬಂಗಾಳ ಮಾತ್ರವಲ್ಲ, ಒಂದೇ ವಾರದಲ್ಲಿ ದೇಶಾದ್ಯಂತ ಸಿಎಎ ಜಾರಿಗೆ ಬರುವುದು ನಿಶ್ಚಿತವಾಗಿದೆ. ಇದು ನಾವು ನೀಡುತ್ತಿರುವ ಗ್ಯಾರಂಟಿಯಾಗಿದೆ” ಎಂದು ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಸಿಎಎ ಜಾರಿ ಸಂಬಂಧ ಕೇಂದ್ರ ಸರ್ಕಾರವು ಇದುವರೆಗೆ ನಿಯಮಗಳನ್ನು ರೂಪಿಸಿರಲಿಲ್ಲ. ಈಗ ಜಾರಿ ಕುರಿತು ಕೇಂದ್ರ ಸಚಿವರೇ ಹೇಳಿಕೆ ನೀಡಿರುವುದರಿಂದ ಸಿಎಎ ಜಾರಿ ವಿಷಯವು ಮುನ್ನೆಲೆಗೆ ಬಂದಿದೆ.
ಸಿಎಎ ಜಾರಿ ತಡೆಯಲು ಸಾಧ್ಯವಿಲ್ಲ ಎಂದಿರುವ ಅಮಿತ್ ಶಾ
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷದ ಡಿಸೆಂಬರ್ನಲ್ಲಿಯೇ ಮಹತ್ವದ ಘೋಷಣೆ ಮಾಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಎಎ ಜಾರಿ ವಿರೋಧಿಸಿದ್ದರಿಂದ ಅಮಿತ್ ಶಾ ತಿರುಗೇಟು ನೀಡಿದ್ದರು. “ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದ್ದರು. ಈಗಾಗಲೇ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನ ಎರಡೂ ಸದನಗಳು ಅಂಗೀಕಾರ ನೀಡಿದ್ದು, ರಾಷ್ಟ್ರಪತಿಯವರು ಅಂಕಿತ ಹಾಕಿದ ಕಾರಣ ವಿಧೇಯಕವು ಕಾಯ್ದೆಯಾಗಿ ಬದಲಾಗಿದೆ.
2019ರಲ್ಲೇ ಸಿಎಎ ತಿದ್ದುಪಡಿ ಜಾರಿಯಾದರೂ ನಿಯಮಗಳ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಯ ಅನ್ವಯ ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು, ಸಿಖ್ಖರು, ಬೌದ್ಧರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಪ್ರವೇಶಿಸಿದ್ದರೆ ಅವರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಅವಕಾಶವನ್ನು ಈ ಸಿಎಎ ಒದಗಿಸುತ್ತದೆ. ಆದರೆ, ಸಿಎಎ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿದ ಕಾರಣ ಹಲವಾರು ಜನ ಮೃತಪಟ್ಟಿದ್ದಾರೆ.