ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಸಜ್ಜು!
– 2024 ಜ.21ರಿಂದ 24ವರೆಗೂ ವಿಶೇಷ ಪೂಜೆ
– ಪ್ರಧಾನಿ ಮೋದಿ ಅವರಿಂದ ರಾಮ ಮಂದಿರ ಜ.22ಕ್ಕೆ ಉದ್ಘಾಟನೆ
NAMMUR EXPRESS NEWS
ಹೊಸದಿಲ್ಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರವನ್ನು 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮ ಮಂದಿರ ಜ. 24ಕ್ಕೆ ಉದ್ಘಾಟನೆಯಾಗಲಿದೆ ಈ ಹಿಂದೆ ಹೇಳಲಾಗಿತ್ತು. ಆದರೆ, ಪ್ರಧಾನಿ ಮೋದಿ ಜನವರಿ 22ಕ್ಕೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಮೂಲಗಳು ಖಚಿತ ಪಡಿಸಿವೆ ಎಂದು ಖಾಸಗಿ ಟಿವಿ ವಾಹಿನಿಯೊಂದು ವರದಿ ಮಾಡಿದೆ.
ಜನವರಿ 21 ರಿಂದ 24ವರೆಗೆ ವಿಶೇಷ ಪೂಜೆ
ಮಂದಿರ ಉದ್ಘಾಟನೆಗೂ ಒಂದು ವಾರ ಮೊದಲು ಧಾರ್ಮಿಕ ಕಾರ್ಯಗಳು ಆರಂಭವಾಗಲಿವೆ. ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಈ ಹಿಂದೆ ನೀಡಿರುವ ಮಾಹಿತಿ ಪ್ರಕಾರ, ರಾಮಲಲ್ಲಾವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆ ಕಾರ್ಯ ಜ. 21ರಿಂದ 24ರವರೆಗೆ ಜರುಗಲಿದ್ದು, ಪ್ರಧಾನಿ ಮೋದಿ ಭೇಟಿಯ ದಿನಾಂಕವನ್ನು ನೋಡಿಕೊಂಡು ಉದ್ಘಾಟನಾ ಕಾರ್ಯ ನಡೆಸಲಾಗುವುದು ಎಂದು ಹೇಳಿತ್ತು.
ನೆಲ ಅಂತಸ್ತು ಮತ್ತು ನೆಲಮಾಳಿಗೆ ಕಾಮಗಾರಿ ಪೂರ್ಣ ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ 2019ರ ನವೆಂಬರ್ 9ರಂದು ತೀರ್ಪು ಪ್ರಟಿಸಿದ ನಂತರ ರಾಮಮಂದಿರ ನಿರ್ಮಾಣಕ್ಕೆ ಇದ್ದ ಕಾನೂನಾತ್ಮಕ ತೊಡಕು ನಿವಾರಣೆಯಾಗಿತ್ತು, 2020ರ ಅ.5ರಂದು ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸದ್ಯ ಮಂದಿರದ ನೆಲಅಂತಸ್ತು ಮತ್ತು ನೆಲಮಾಳಿಗೆ ಕಾಮಗಾರಿ ಪೂರ್ಣಗೊಂಡಿದೆ. ಇತ್ತೀಚೆಗಷ್ಟೇ ದೇಗುದಲ ಟ್ರಸ್ಟ್ ಮಂದಿರದ ಕಾಮಗಾರಿಯ ಚಿತ್ರವನ್ನು ಹಂಚಿಕೊಂಡಿತ್ತು.