ರಾಮ ಮಂದಿರ ಉದ್ಘಾಟನೆ: ರಾಜ್ಯದಲ್ಲಿ ಹೈ ಅಲರ್ಟ್!
– ಎಲ್ಲೆಡೆ ಬಿಗಿ ಭದ್ರತೆ: ಶಾಂತಿಯುತ ಆಚರಣೆಗೆ ಸಜ್ಜು
– ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ
NAMMUR EXPRESS NEWS
ಅಯೋಧ್ಯ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ದೇವಸ್ಥಾನ ಹಾಗೂ ಮಂದಿರಗಳು ಸೇರಿದಂತೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನುಹಾಗೂ ಆಯಕಟ್ಟಿನ ಜಾಗಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ.ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಪಿಕೆಟಿಂಗ್ ನೇಮಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 24 ಗಂಟೆ ಹಗಲು ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆ ಮಾಡಲಾಗಿದೆ.ಚೆಕ್ ಪಾಯಿಂಟ್ಗಳನ್ನು ನಿಯೋಜಿಸಲಾಗಿದೆ. ಭಾನುವಾರ ತಡರಾತ್ರಿ ಮತ್ತು ಮುಂಜಾನೆ ವಿಶೇಷ ಗಸ್ತುಗಳನ್ನು ಆಯೋಜಿಸಲಾಗಿದೆ.
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿದ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ರೀತಿಯ ಮೆರವಣಿಗೆ ಅನುಮತಿಸಿಲ್ಲ.ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯಾ ಎಸಿಪಿಯವರ ಮಾರ್ಗದರ್ಶನದಲ್ಲಿ ಈಗಾಗಲೇ ಶಾಂತಿ ಸಭೆಗಳನ್ನು ಆಯೋಜಿಸಲಾಗಿದೆ. ಕೆಲವು ನಗರಗಳಲ್ಲಿ ಪ್ಲೆಕ್ಸ್, ಬ್ಯಾನರ್ ಬಂಟಿಂಗ್ಸ್ ಅಳವಡಿಕೆಗಳ ಮೇಲೆ ಸೂಕ್ತ ನಿಗಾ ಇರಿಸಲಾಗಿದೆ. ಮತ್ತು ಆಯೋಜಕರಿಗೆ ಅವುಗಳ ಭದ್ರತೆಯನ್ನು ಖಚಿತಪಡಿಸಲು ಸೂಚಿಸಲಾಗಿದೆ. ಜ.21ರ ಮಧ್ಯರಾತ್ರಿಯಿಂದ ಜನವರಿ 23ರ ಮುಂಜಾನೆವರೆಗೆ ಕೆಲವು ನಗರಗಳಲ್ಲಿ ಬಾರ್ ಹಾಗೂ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಕಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ರಾಮ ಮಂದಿರ ಉದ್ಘಾಟನೆ ಅಂಗವಾಗಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಎಲ್ಲಾ ಆಡಳಿತಗಳು ಕ್ರಮ ಕೈಗೊಂಡಿವೆ.