ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ..!
– ಮದ್ಯ ಕುಡಿದರೆ ಸ್ಟಾರ್ಟ್ ಆಗಲ್ಲ ಈ ಬೈಕ್!
– ಸುರಕ್ಷತೆಗಾಗಿ ಬೈಕ್ ನಲ್ಲಿ ಹಲವು ಫೀಚರ್ಸ್!
NAMMUR EXPRESS NEWS
ಪ್ರಯಾಗರಾಜ್ : ಭಾರತದಲ್ಲಿ ಸ್ಟಾರ್ಟ್ಅಪ್ ಕಂಪನಿಗಳು, ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ದಿನ ಎಲೆಕ್ಟ್ರಿಕ್ ವಾಹನದಲ್ಲಿ ಸಂಶೋಧನೆ ನಡೆಸಿ ಹೊಸ ಹೊಸ ಅಚ್ಚರಿಗಳನ್ನು ನೀಡುತ್ತಿದ್ದಾರೆ. ಇದೀಗ ಮೋತಿಲಾಲ್ ನೆಹರೂ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಹಾಗೂ ಸೊಸೈಟಿ ಆಫ್ ಆಟೋಮೇಟೀವ್ ಎಂಜಿನೀಯರ್ಸ್ ಜಂಟಿಯಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗರಿಷ್ಠ ಸುರಕ್ಷತೆಯ ಎಲೆಕ್ಟ್ರಾನಿಕ್ ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಮದ್ಯ ಕುಡಿದು ಬಂದರೆ ಈ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ ಆಗಲ್ಲ. ಇಷ್ಟೇ ಅಲ್ಲ ಸ್ಟಾರ್ಟ್ ಮಾಡಿದ ಬಳಿಕ ಮದ್ಯ ಕುಡಿದಿದ್ದರೂ ಈ ಬೈಕ್ ಆಟೋಮ್ಯಾಟಿಕ್ ಆಗಿ ಆಫ್ ಆಗಲಿದೆ. ಅಲಹಾಬಾದ್ ಟೆಕ್ನಾಲಜಿ ಕಾಲೇಜು ಹಾಗೂ ಸೊಸೈಟಿ ಆಟೋ ಎಂಜನಿಯರ್ಸ್ ಸಾಧನೆಗೆ ಇದೀಗ ಭಾರತ ಮಾತ್ರವಲ್ಲ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಬೈಕ್ನಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಆಲ್ಕೋಹಾಲ್ ಡಿಟೆಕ್ಟಿವ್ ಸೆನ್ಸಾರ್ ಅಳವಡಿಸಲಾಗಿದೆ. ಈ ಸೆನ್ಸಾರ್ ಮದ್ಯ ಕುಡಿದು ಬಂದರೆ ತಕ್ಷಣವೇ ಡಿಟೆಕ್ಟ್ ಆಗಲಿದೆ. ಈ ಸೆನ್ಸಾರ್ ಬೈಕ್ನ ಮೋಟಾರ್ಗೆ ಸಂಜ್ಞೆಗಳನ್ನು ನೀಡಲಿದೆ. ಅಲ್ಕೋಹಾಲ್ ಡಿಟೆಕ್ಟ್ ಆದರೆ ಬೈಕ್ ಮೋಟಾರು ಸ್ಟಾರ್ಟ್ ಆಗುವುದಿಲ್ಲ. ಮದ್ಯ ಕುಡಿದು ವಾಹನ ಚಲಾಯಿಸಿ ಆಗುವ ಅಪಘಾತಗಳನ್ನು, ಅನಾಹುತಗಳನ್ನು ತಪ್ಪಿಸಲು ಈ ಫೀಚರ್ಸ್ ಅಭಿವೃದ್ಧಿಪಡಿಸಲಾಗಿದೆ. ಸುರಕ್ಷತೆಗಾಗಿ ಹಲವು ಫೀಚರ್ಸ್ ಈ ಬೈಕ್ನಲ್ಲಿದೆ. ಅಪಘಾತವಾದ ತಕ್ಷಣವೇ SoS ತುರ್ತು ಕರೆಯನ್ನು ಈ ಬೈಕ್ ಆಟೋಮ್ಯಾಟಿಕ್ ಆಗಿ ಮಾಡಲಿದೆ. ಅಪಘಾತದ ಲೊಕೇಶನ್ ಸೇರಿದಂತೆ ಇತರ ಮಾಹಿತಿಗಳನ್ನು ನೀಡಲಿದೆ. ಇದರಿಂದ ತುರ್ತು ಸೇವೆ ತಕ್ಷಣವೇ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಲಿದೆ.
ಕಾರುಗಳಲ್ಲಿರುವಂತೆ ಹಿಲ್ ಅಸಿಸ್ಟ್ ಫೀಚರ್ಸ್ ಕೂಡ ಇದರಲ್ಲಿದೆ. ಎತ್ತರದ ರಸ್ತೆಗಳು, ಗುಡ್ಡಗಳ ರಸ್ತೆಗಳಲ್ಲಿ ಬೈಕ್ ನಿಲ್ಲಿಸಿದರೆ ಹಿಲ್ ಅಸಿಸ್ಟ್ ಫೀಚರ್ಸ್ನಿಂದ ಬೈಕ್ ಹಿಂದಕ್ಕೆ ಚಲಿಸುವುದಿಲ್ಲ. ಇದರಿಂದ ಯಾವುದೇ ಆತಂಕವಿಲ್ಲದೆ ಬೈಕ್ ರೈಡ್ ಮಾಡಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು ಗರಿಷ್ಠ 70 ಕಿ.ಮೀ ವೇಗದಲ್ಲಿ ರೈಡ್ ಮಾಡಬಹುದು. ಸ್ಮೋಕ್ ಸೆನ್ಸಾರ್ ಅಳವಡಿಸಲಾಗಿದೆ. ಇದರಿಂದ ಬೈಕ್ನಲ್ಲಿ ಯಾವುದೇ ಬೆಂಕಿ, ಹೊಗೆ ಕಾಣಿಸಿಕೊಂಡರೆ ಅಲರ್ಟ್ ಮಾಡಲಿದೆ. ಇದರ ಜೊತೆಗೆ ಬೈಕ್ ಸುತ್ತ ಮುತ್ತ ಬೆಂಕಿ, ಹೊಗೆ ಕಾಣಿಸಿಕೊಂಡರೂ ಅಲರ್ಟ್ ಮಾಡಲಿದೆ. ಐಡೆಂಟಿಟಿ ಥೆಫ್ಟ್ ಫೀಚರ್ಸ್ ಮೂಲಕ ಬೈಕ್ ಕಳುವಾಗುವದನ್ನು ತಪ್ಪಿಸಲಿದೆ. ಈ ಬೈಕ್ ಬೆಲೆ 1.30 ಲಕ್ಷ ರೂಪಾಯಿ ಆಗಿದೆ.