ಭಾರತದ ಕಾಫಿಗೆ ಈಗ ಅತೀ ಹೆಚ್ಚು ಬೆಲೆ!
* ಕಾಫಿ ಪುಡಿ ದರ 100 ರೂ. ಜಾಸ್ತಿ ಆಯ್ತು!
* ಹಾಲು ಖರೀದಿ ದರ 5 ರೂ. ಏರಿಕೆ ಸಾಧ್ಯತೆ
NAMMUR EXPRESS NEWS
ಬೆಂಗಳೂರು: ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೇಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್ ಈ ವರ್ಷ 50 ಕೆ.ಜಿ. ಬ್ಯಾಗ್ಗೆ 20,000 ರೂ. ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಕಾಫಿ ಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ. ಜಗತ್ತಿನಲ್ಲೇ ಅತಿಹೆಚ್ಚು ಕಾಫಿ ಉತ್ಪಾದಿಸುವ ಬ್ರೆಜಿಲ್, ವಿಯೆಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಭಾರತದಲ್ಲೂ ವಾರ್ಷಿಕ ಉತ್ಪಾದನೆಯ ಗುರಿ ತಲುಪಿಲ್ಲ. ಇದರಿಂದ ಲಂಡನ್ ಮಾರುಕಟ್ಟೆಯಲ್ಲಿ ಕಾಫಿಗೆ ಬೇಡಿಕೆ ಹೆಚ್ಚಾಗಿದ್ದು, ಇದು ಧಾರಣೆ ಏರಿಕೆಗೆ ಕಾರಣವಾಗಿದೆ.
ಕಾಫಿ ಧಾರಣೆ 20,000 ರೂ.ಗೆ ತಲುಪಿರುವ ಜತೆಗೆ ಕೊರತೆಯೂ ಉಂಟಾಗಿದೆ. ಇದರಿಂದ ಬೆಂಗಳೂರಿನಲ್ಲಿ ಕಾಫಿ ಪುಡಿ ದರ ಒಂದು ಕೆ.ಜಿ.ಗೆ 100 ರೂ. ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಉತ್ತಮ ಗುಣಮಟ್ಟದ ಕಾಫಿ ಪುಡಿ ಕೆ.ಜಿ.ಗೆ 480 ರೂ.ಗೆ ಮಾರಾಟ ಆಗುತ್ತಿದೆ. ಇನ್ನೆರಡು ದಿನದಲ್ಲಿ ಕಾಫಿ ಪುಡಿ ದರವನ್ನು 530 ರೂ.ಗಳಿಗೆ ಹೆಚ್ಚಿಸಲು ಕಾಫಿ ವರ್ಕ್ಸ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಹೋಟೆಲ್, ಕಾಫಿ ಶಾಪ್ ಗಳಲ್ಲೂ ಕಾಫಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ಕಾಫಿ ಧಾರಣೆಯ ನಿಯಂತ್ರಣ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಇದರ ಮೇಲೆ ಸರಕಾರಗಳು ಹಿಡಿತ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರು ಅನುಭವಿಸುವುದು ಅನಿವಾರ್ಯವಾಗಿದೆ.
* ಹಾಲು ಖರೀದಿ ದರ 5 ರೂ. ಏರಿಕೆ?
ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್ಗೆ 5 ರೂಪಾಯಿ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಟಕೇಶ ಹೇಳಿದ್ದಾರೆ. ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡುವಂತೆ ರೈತರ ಒತ್ತಾಯವಿದ್ದು,ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ. ಆದರೆ, ಇದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.