ದೇಶದ ಹೆಸರು ಬದಲಿಸಲು ಮುಂದಾಯ್ತಾ ಕೇಂದ್ರ ಸರ್ಕಾರ?
– ಚರ್ಚೆ ಹುಟ್ಟು ಹಾಕಿದ ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆ
– ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ!
NAMMUR EXPRESS NEWS
ನವದೆಹಲಿ: ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ.
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇಂಡಿಯಾ ಎನ್ನುವ ಬದಲು ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದ ಆಹ್ವಾನ ಪತ್ರದಲ್ಲಿ ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.ಸೆ. 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ G-20 ದೇಶಗಳ ಸಮಾವೇಶ ನಡೆಯಲಿದ್ದು, ರಾಷ್ಟ್ರಪತಿ ಭವನದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.
ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ :
ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್ ಆಫ್ ಭಾರತ್ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.