ಜೈ ಶ್ರೀರಾಮ್…ಅಯೋಧ್ಯೆಗೆ ಬಂದ ರಾಮ!
– ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ
– ದೇಶದ ಮೂಲೆ ಮೂಲೆಗಳಲ್ಲಿ ಸಂಭ್ರಮ
– ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆ
NAMMUR EXPRESS NEWS
ದೇಶ ಸಂಭ್ರಮದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ರಾಮ ಅಯೋಧ್ಯೆಗೆ ಪುನಃ ಮರಳಿದ್ದಾನೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ದಿವ್ಯ ಘಳಿಗೆಯಲ್ಲಿ ನೆರವೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರೇಷ್ಮೆ ವಸ್ತ್ರದಲ್ಲಿ ಮುಖ್ಯವ್ಯಕ್ತಿಯಾಗಿ ಈ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಗಣಪತಿಯ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿ ಗರ್ಭಗುಡಿಗೆ ಕಾಲಿಟ್ಟ ಮೋದಿಯವರೊಂದಿಗೆ ಮೋಹನ್ ಭಾಗವತ್ ಸಹ ಉಪಸ್ಥಿತರಿದ್ದರು. ಈ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದು ಪೇಜಾವರ ಶ್ರೀಗಳು. ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿದ್ದು ಶಾಂತಿ ಕಾಯ್ದುಕೊಳ್ಳುವಲ್ಲಿ, ಪದ್ಧತಿಯ ಪ್ರಕಾರ ಸಕಲವನ್ನೂ ನೆರವೇರಿಸುವಲ್ಲಿ ಅಯೋಧ್ಯೆ ಯಶಸ್ವಿಯಾಗಿದೆ.
ಇದೇ ಸುಸಂದರ್ಭದಲ್ಲಿ ದೇಶಾದ್ಯಂತ ಪ್ರತೀ ದೇವಾಲಯಗಳಲ್ಲೂ ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ, ದೇವಸ್ಥಾನ ಸಮಿತಿಗಳಿಂದ ಮಹಾ ಮಂಗಳಾರತಿ ಪೂಜೆ ನೆರವೇರಿದ್ದು ಇದೊಂದು ಸಾರ್ವಜನಿಕ ಹಬ್ಬವಾಗಿದೆ. ಶ್ರೀರಾಮನು ಮಹಾವಿಷ್ಣುವಿನ ಅವತಾರವೇ ಆಗಿದ್ದು ಇದೀಗ ಗರ್ಭಗುಡಿಯಲ್ಲಿ ಮಹಾವಿಷ್ಣುವಿನಂತೆಯೇ ಕಂಗೊಳಿಸುತ್ತಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಹೊರಗಡೆ ಹೆಲಿಕಾಪ್ಟರ್ ನಿಂದ ಹೂಮಳೆ ಸುರಿಸಲಾಯ್ತು, ಸಹಸ್ರಾರು ಭಕ್ತರ, ಸಾಧುಸಂತರ ಜೈ ಶ್ರೀರಾಮ್ ಎನ್ನುವ ಘೋಷಣೆ ಅಯೋಧ್ಯೆಯ ತುಂಬ ಮೊಳಗಿತು. ಮಂತ್ರಘೋಷಗಳು, ದೀಪದ ಹಣತೆಗಳು, ಘಂಟಾ ನಿನಾದ, ಮಹಾಮಂಗಳಾರತಿಯ ಬೆಳಕಿನಿಂದ ಎಲ್ಲ ದೇವಸ್ಥಾನಗಳೂ ಪ್ರಕಾಶಮಾನವಾಗಿ ಹೊಳೆಯುತ್ತಿವೆ. ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆಗಳು ನಡೆಯಲಿದ್ದು ಶಾಂತಿಯಿಂದ ಈ ದೇಶವ್ಯಾಪಿ ಸಂಭ್ರಮ ಜರುಗುತ್ತಿದೆ. ಸೋಮವಾರ ರಾತ್ರಿವರೆಗೆ ಎಲ್ಲೆಡೆ ಕಾರ್ಯಕ್ರಮ ನಡೆಯುತ್ತಿದೆ.