ಅಯೋಧ್ಯೆಗೆ ಕರ್ನಾಟಕದ ಕಾಣಿಕೆ!
– ಮೈಸೂರಿನ ಶಿಲ್ಪಿ ಕೆತ್ತಿದ ಶ್ರೀರಾಮ ವಿಗ್ರಹ!
– ಹೆಚ್ ಡಿ ಕೋಟೆಯ ಕಲ್ಲು ಬಳಕೆ!
NAMMUR EXPRESS NEWS
ಬೆಂಗಳೂರು: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಇದೇ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಘಳಿಗೆಗಾಗಿ ದೇಶ ವಿದೇಶಗಳೂ ಎದುರು ನೋಡುತ್ತಿವೆ. ಇಂತಹ ಪುಣ್ಯ ಕ್ಷೇತ್ರಕ್ಕೆ ನಮ್ಮ ಕರ್ನಾಟಕದಿಂದಲೂ ಕಾಣಿಕೆ ಮತ್ತು ಅಳಿಲು ಸೇವೆಗಳನ್ನು ಸಲ್ಲಿಸಲಾಗಿದೆ. ಇದೀಗ ಆ ಸೇವೆಯೊಂದಿಗೆ ಅತ್ಯುತ್ತಮ ಸೇರ್ಪಡೆಯಾಗಿ ಕರ್ನಾಟಕದ ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಶ್ರೀ ರಾಮಮಂದಿರದ ರಾಮನ ಮೂರ್ತಿಯನ್ನು ಕೆತ್ತಿರುವುದು! ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಶ್ರೀರಾಮ ವಿಗ್ರಹದ ಕೆತ್ತನೆಗೆ ಬಳಸಲಾದ ಕಲ್ಲು ಕೂಡ ನಮ್ಮ ಕರ್ನಾಟಕದ ಹೆಚ್ ಡಿ ಕೋಟೆಯದು ಎಂಬುದು ಅತ್ಯಂತ ಹೆಮ್ಮೆಯ ಮತ್ತು ಸಂತಸದ ಸಂಗತಿಯಾಗಿದೆ.
ಶ್ರೀರಾಮನ ಭಂಟ ಹನುಮ ಜನಿಸಿದ ನೆಲ ಕರ್ನಾಟಕ. ಇಲ್ಲಿಂದಲೇ ಮೂರ್ತಿಯ ಕೆತ್ತನೆಯಾಗಿರುವುದು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗಿದೆ. ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಯೋಗಿರಾಜ್ ಹಾಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಅವರ ತಂಡದವರಿಗೆ ಇಡೀ ಕನ್ನಡ ನೆಲ ಅಭಿನಂದಿಸುತ್ತದೆ.