ಅಯೋಧ್ಯೆ ಕಡೆ ಲಕ್ಷ ಲಕ್ಷ ಭಕ್ತರ ಸಾಲು!
– ರಾಮಲಲ್ಲಾ ದರ್ಶನಕ್ಕೆ ಭಕ್ತರ ನೂಕು ನುಗ್ಗಲು
– ಮೊದಲ ದಿನವೇ ರಾಮನ ದರ್ಶನಕ್ಕೆ 5 ಲಕ್ಷ ಜನರು
– ಅಯೋಧ್ಯೆಗೆ ಸದ್ಯಕ್ಕೆ ಬರಬೇಡಿ: ಉ.ಪ್ರ ಪೊಲೀಸರು
– ಕೊರೆವ ಚಳಿಯಲ್ಲೂ ಮಧ್ಯ ರಾತ್ರಿಯಿಂದಲೇ ಕ್ಯೂ
NAMMUR EXPRESS NEWS
ಅಯೋಧ್ಯೆ: ರಾಮನೂರು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾದ ಬಳಿಕ ‘ಬಾಲರಾಮ’ನ ದರ್ಶನಕ್ಕೆ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದುಬರುತ್ತಿದೆ. ರಾಮಲಲ್ಲಾನ ದರ್ಶನ ಪಡೆಯಲು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ಮಂದಿರದ ಆವರಣದ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಬ್ಯಾರಿಗೇಡ್ಗಳನ್ನು ದಾಟಿ ಆವರಣದೊಳಗೆ ಏಕಕಾಲಕ್ಕೆ ಪ್ರವೇಶಿಸಿದ್ದರಿಂದ ನೂಕು ನುಗ್ಗಲು ಉಂಟಾಗಿದೆ. ತಳ್ಳಾಟದಲ್ಲಿ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು ವರದಿಯಾಗಿದೆ. ಜನದಟ್ಟಣೆ ನಿಭಾಯಿಸುವಲ್ಲಿ ಅಯೋಧ್ಯೆ ಜಿಲ್ಲಾಡಳಿತ ವಿಫಲಗೊಂಡಿದೆ ಎಂದು ಅಸಮಾಧಾನ ಹೊರಹಾಕಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡು, ಪರಿಸ್ಥಿತಿ ತಿಳಿಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಜನರ ಪ್ರವಾಹ: ಭದ್ರತೆ ಕಷ್ಟ ಕಷ್ಟ!
ಜನರ ಪ್ರವಾಹ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು, ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ತಿಳಿಸಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 8 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪರಿಸ್ಥಿತಿ ಮಿತಿಮೀರಿತ್ತು. ಶಿಸ್ತು, ಸಂಯಮ ಪಾಲಿಸುವಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದರೂ ಪರಿಸ್ಥಿತಿ ಹತೋಟಿಗೆ ಬಂದಿರಲಿಲ್ಲ. ಆಗ ಅಯೋಧ್ಯೆ ಜಿಲ್ಲಾಡಳಿತವು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡಿತು. ಒಂದು ಹಂತದಲ್ಲಿ ತಾತ್ಕಾಲಿಕ ಅವಧಿಗೆ ದರ್ಶನವನ್ನು ಬಂದ್ ಮಾಡಲಾಗಿತ್ತು.
ಅಯೋಧ್ಯೆ ನಗರ ಫುಲ್ ಟ್ರಾಫಿಕ್ ಜಾಮ್!
ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವು ಸಂಚಾರ ಮಾರ್ಗಗಳಲ್ಲಿಬದಲಾವಣೆ ತಂದಿದ್ದಾರೆ. ಲಖನೌನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಾರಾಬಂಕಿಯಿಂದ ಅಯೋಧ್ಯೆ ಕಡೆಗಿನ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಈ ಮಧ್ಯೆ, ”ಮೊದಲ ದಿನವೇ ರಾಮಲಲ್ಲಾನ ದರ್ಶನ ಪಡೆಯಬೇಕು ಎಂಬ ಆತುರಬೇಡ. ಮಂದಿರದ ಆವರಣದಲ್ಲಿಸೆಲ್ಫಿ ಕ್ಲಿಕ್ಕಿಸಿಕೊಂಡು ಸರತಿ ಸಾಲಿಗೆ ಅಡ್ಡಿಪಡಿಸಬೇಡಿ. ಸಾಧ್ಯವಾದಷ್ಟು ದಿನ ಅಯೋಧ್ಯೆ ಭೇಟಿ ಮುಂದೂಡಿ,” ಎಂದು ಉ.ಪ್ರದೇಶ ಪೊಲೀಸ್ ಇಲಾಖೆ ‘ಎಕ್ಸ್’ನಲ್ಲಿಮನವಿ ಮಾಡಿಕೊಂಡಿದೆ.
ಗಣರಾಜ್ಯೋತ್ಸವ ದಿನದ ಪರೇಡ್ನಲ್ಲಿಉತ್ತರ ಪ್ರದೇಶದಿಂದ ‘ರಾಮಲಲ್ಲಾ’ ಟ್ಯಾಬ್ಲೊ ಈ ಬಾರಿ ಗಮನ ಸೆಳೆಯಲಿದೆ. ರಾಮಲಲ್ಲಾನಿಗೆ 6 ಕೆ.ಜಿ ತೂಕದ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಸೂರತ್ ವಜ್ರದ ವ್ಯಾಪಾರಿ ಮುಕೇಶ್ ಪಟೇಲ್ ರಾಮನಿಗೆ ತಲೆಬಾಗಿದ್ದಾರೆ. ರಾಮ ಮಂದಿರಕ್ಕೆ ಉದ್ಯಮಿ ಮುಕೇಶ್ ಅಂಬಾನಿಯಿಂದ 2.5 ಕೋಟಿ ರೂ. ದೇಣಿಗೆ ನೀಡಿಕೆ ನೀಡಿದ್ದಾರೆ. ಹೀಗೆ ಹತ್ತು ಹಲವು ವಿಶೇಷತೆಗಳು ಇವೆ.
ರಾಮ ಮಂದಿರ ದರ್ಶನ ಸಮಯ ಏನು?
ಬೆಳಗ್ಗೆ 7 ರಿಂದ 11.30 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 7 ಗಂಟೆವರೆಗೆ