– ಮಧುರೈ ರೈಲಿನಲ್ಲಿ ಅಗ್ನಿ ಅವಘಡಕ್ಕೆ 10 ಬಲಿ!
– 20 ಮಂದಿ ಗಂಭೀರ ಗಾಯ: ರಕ್ಷಣಾ ಕಾರ್ಯಾಚರಣೆ
– ಕಂದಕಕ್ಕೆ ಬಿದ್ದ ಜೀಪ್: 9 ಮಂದಿ ಮಹಿಳೆಯರು ಸಾವು
NAMMUR EXPRESS NEWS
ಮಧುರೈ: ತಮಿಳುನಾಡಿನ ಮಧುರೈ ರೈಲ್ವೇ ಜಂಕ್ಷನ್ನಲ್ಲಿ ನಿಂತಿದ್ದ ಪ್ರವಾಸಿ ರೈಲಿಗೆ ಬೆಂಕಿ ತಗುಲಿ 10 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ 5.15 ಕ್ಕೆ ಸಂಭವಿಸಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿತ್ತು. ಮೊದಲು ಇಬ್ಬರು ಸಾವನ್ನಪ್ಪಿದರು. ಆದ್ರೆ, ಇದೀಗ ಆಸ್ಪತ್ರೆಗೆ ದಾಖಲಾದ 8 ಮಂದಿ ಚಿಕಿತ್ಸೆಗೆ ಫಲಿಸದೇ ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಮಂದಿ ಗಂಭೀರವಾದ ಸುಟ್ಟಗಾಯಗಳಿಗೆ ಒಳಗಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡದಲ್ಲಿ ಎರಡು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಬೆಂಕಿ ಮತ್ತೆ ಹೊತ್ತಿಕೊಳ್ಳುವುದನ್ನು ತಡೆಯಲು ಅಗ್ನಿಶಾಮಕ ದಳದವರು ಸುಟ್ಟ ಕೋಚ್ಗಳನ್ನು ತಂಪಾಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರು ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡಿದೆ. ಈ ವೇಳೆ 2 ಬೋಗಿಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ.
ಕಂದಕಕ್ಕೆ ಬಿದ್ದ ಜೀಪ್: 9 ಮಂದಿ ಮಹಿಳೆಯರು ಸಾವು
ಕೇರಳದ ವಯನಾಡು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಜೀಪ್ ಅಪಘಾತದಲ್ಲಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಕಂದಕಕ್ಕೆ ಬಿದ್ದು 9 ಜನರು ಮೃತಪಟ್ಟ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪಘಾತಕ್ಕೀಡಾದ ಜೀಪ್ ಚಹಾ ತೋಟದ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಒಟ್ಟು 12 ಜನ ಮಹಿಳೆಯರು ಜೀಪ್ನಲ್ಲಿದ್ದರು. ಇವರು ಚಹಾ ತೋಟದ ಕೆಲಸ ಮುಗಿಸಿ ತಮ್ಮಮನೆಗಳಿಗೆ ಮರಳುತ್ತಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಮಾರ್ಗ ಮಧ್ಯೆ 30 ಅಡಿ ಆಳದ ಕಂದಕಕ್ಕೆ ಜೀಪ್ ಉರುಳಿಬಿದ್ದಿದೆ.