ಅಯೋಧ್ಯೆ ಸಂಭ್ರಮ!
– 1200 ಚಾಕ್ ಪೀಸ್ ನಲ್ಲಿ ತಯಾರಾದ ರಾಮ ಮಂದಿರ!
– ಪೆನ್ಸಿಲ್ ತುದಿಯಲ್ಲಿ ಮೂಡಿ ಬಂದ ರಾಮಮಂದಿರ!
– ಪ್ರಾಣ ಪ್ರತಿಷ್ಠಾಪನೆಯಂದು ಸಾರ್ವತ್ರಿಕ ರಜೆ ಬೇಡ; ಖಾಸಗಿ ಶಾಲೆಗಳ ಒಕ್ಕೂಟ
NAMMUR EXPRESS NEWS
ಉತ್ತರಕನ್ನಡ: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶ ವಿದೇಶಗಳಿಂದ ಜನ ತಮಗಾದ ರೀತಿಯಲ್ಲಿ ಕಾಣಿಕೆಗಳನ್ನು ಕಳಿಸುತ್ತಿದ್ದಾರೆ. ತಮ್ಮ ಕಲೆಗಳ ಮೂಲಕ ಭಕ್ತಿ ವ್ಯಕ್ತ ಪಡಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತಾಲ್ಲೂಕಿನ ಗೇರುಸೊಪ್ಪದ ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರನಾದ ಪ್ರದೀಪ್ ನಾಯ್ಕ ಎಂಬುವರು ಚಿಕ್ಕಂದಿನಿಂದಲೂ ವಿವಿಧ ಕಲೆಗಳ ಮೇಲೆ ಆಸಕ್ತಿ ಹೊಂದಿದ್ದು, ಚಿತ್ರಕಲೆ, ತಬಲಾ, ಸಂಗೀತ, ಚಾಕ್ ಪೀಸ್ ಆರ್ಟ್ ಹೀಗೆ ಹಲವು ರಂಗಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಇದೀಗ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಶ್ರೀ ರಾಮ ಮಂದಿರದ ಮಾದರಿಯನ್ನು ಸುಮಾರು 1200 ಚಾಕ್ ಪೀಸ್ ಗಳನ್ನು ಬಳಸಿ ತಯಾರಿಸಿದ್ದಾರೆ. 25 ದಿನಗಳ ಕಾಲ 250 ಕ್ಕೂ ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ಅದ್ಭುತವಾದ ಶ್ರೀ ರಾಮ ಮಂದಿರದ ಮಾದರಿ ಕಲಾಕೃತಿ ನಿರ್ಮಾಣವಾಗಿದೆ.
ಜನವರಿ 22 ರಂದು ನಡೆಯಲಿರುವ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಉದ್ಘಾಟನೆಯ ದಿನವೇ ಕಲಾವಿದ ಪ್ರದೀಪ್ ನಾಯ್ಕ ತಮ್ಮ ಕಲೆಯನ್ನು ಗೇರುಸೊಪ್ಪದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ-ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದಾರೆ. 2021 ರ ಮೇ 22 ರಂದು 18 ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆಯನ್ನು ಕೆತ್ತುವ ಮೂಲಕ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಪ್ರದೀಪ್ ಸಾಧನೆ ಮಾಡಿದ್ದರು.
ಬುದ್ಧ ಗಾಂಧೀಜಿ, ಐಫೆಲ್ ಟವರ್, ಸೂರ್ಯನಮಸ್ಕಾರದ ಆಕೃತಿ ಹೀಗೆ ಹತ್ತು ಹಲವು ಆಕೃತಿಗಳನ್ನು ರಚಿಸಿ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದ್ದರು. ಪ್ರಸ್ತುತ ಧಾರವಾಡದ ವಿದ್ಯಾಗಿರಿ ಜೆ.ಎಸ್.ಎಸ್ ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
– ಪೆನ್ಸಿಲ್ ತುದಿಯಲ್ಲಿ ಮೂಡಿ ಬಂದ ರಾಮಮಂದಿರ!
ಭದ್ರಾವತಿ: ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಬೀತು ಪಡಿಸುವ ಮೂಲಕ ಗಮನ ಸೆಳೆದಿರುವ ಸಾಧಕ ಎಸ್.ವರುಣ್ ಕುಮಾರ್. ಪೆನ್ಸಿಲ್ ಲೆಡ್ನಲ್ಲಿ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರವನ್ನು ಮೂಡಿಸಿ ರಾಮನಿಗೆ ವಿಶೇಷ ರೀತಿಯಲ್ಲಿ ತಮ್ಮ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಈ ಹಿಂದೆ ಒಂದೇ ಒಂದು ಬೆಂಕಿ ಕಡ್ಡಿಯಲ್ಲಿ ಕೇವಲ ಒಂದೇ ದಿನದಲ್ಲಿ ಅತ್ಯಂತ ಸಣ್ಣ ಪ್ರಮಾಣದ ಲಂಡನ್ ಬ್ರಿಡ್ಜ್ ತಯಾರಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಹೆಸರು ಪಡೆದಿದ್ದಾರೆ.
ಹಳೇನಗರದ ಎನ್ಎಸ್ಟಿ ರಸ್ತೆಯ ನಿವಾಸಿ ಸಿದ್ದರಾಜು ಹಾಗೂ ಗಾಯಿತ್ರಿ ದಂಪತಿಗಳ ಪುತ್ರ, ಎಸ್.ವರುಣ್ ನ್ಯೂಟೌನ್ ಸರಕಾರಿ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ರಜಾ ದಿನಗಳಂದು ಕುಸುರಿ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಆಸಕ್ತಿ ಮೂಡಿದ ಬಗ್ಗೆ ಒಂದು ಖಾಸಗಿ ವಾಹಿನಿಯಲ್ಲಿ ಪ್ರದರ್ಶನವಾಗುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಒಬ್ಬರು ಕುಸುರಿ ಕಲೆಯನ್ನು ಪ್ರದರ್ಶಿಸಿದ್ದನ್ನು ಕಂಡ ವರುಣ್, ತಾನೇಕೆ ಕುಸುರಿ ಕೆಲಸದಲ್ಲಿ ಸಾಧನೆ ಮಾಡಬಾರದೆಂದು ಚಿಂತಿಸಿದರು.
ನಂತರ ಸತತ ಪ್ರಯತ್ನ ದಿಂದ 300ಕ್ಕೂ ಅಧಿಕ ಬಗೆಯ, ವೈವಿಧ್ಯತೆ ತೋರುವ ಕಲಾಕೃತಿಗಳನ್ನು ರಚಿಸಿ ಒಂದೇ ‘ ಬೆಂಕಿಕಡ್ಡಿಯಲ್ಲಿ ತಯಾರಿಸಿದ ಸ್ಥಾಲೆಸ್ಟ್ ಲಂಡನ್ ಬ್ರಿಡ್ಜ್ ನಿರ್ಮಿಸಿದ್ದಾರೆ. ಸೀಮೆಸುಣ್ಣ, ಅಕ್ಕಿಕಾಳು, ಗೋಬಿಕಡ್ಡಿ, ಬೆಂಕಿಕಡ್ಡಿ, ಶೇಂಗಾಬೀಜ ಹಾಗೂ ವಿವಾಹ ಆಮಂತ್ರಣಗಳ ಮೇಲೆ ಕುಸುರಿ ಕಲೆಯನ್ನು ಮೂಡಿಸಿದ್ದಾರೆ. ಶೇಂಗಾಬೀಜದಲ್ಲಿ ಕನ್ನಡ ವರ್ಣಮಾಲೆ, ಸೀಮೆ ಸುಣ್ಣದಿಂದ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಚಿತ್ರನಟಿ ಶ್ರೀದೇವಿ ಅವರ ಚಿತ್ರವನ್ನು ಕೆತ್ತಿದ್ದಾರೆ. ಪೆನ್ಸಿಲ್ ಮದ್ದಿ ನಲ್ಲಿ ವರಮಹಾಲಕ್ಷ್ಮಿ ಹಾಗೂ ಆಂಗ್ಲ ಭಾಷೆಯ ಎಯಿಂದ ಝಡ್ ವರೆಗೆ ಅಕ್ಷರ ಮಾಲೆ, ಗಣಪತಿ ಹೀಗೆ ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ.
– ಪ್ರಾಣ ಪ್ರತಿಷ್ಠಾಪನೆಯಂದು ಸಾರ್ವತ್ರಿಕ ರಜೆ ಬೇಡ; ಖಾಸಗಿ ಶಾಲೆಗಳ ಒಕ್ಕೂಟ
ಬೆಂಗಳೂರು: ಜನವರಿ 22ರಂದು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರವನ್ನು ನಡೆಸುವಂತೆ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್)ನ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಖಾಸಗಿ ಶಾಲೆಗಳಿಗೆ ಸಲಹೆ ನೀಡಿದ್ದಾರೆ.
ಒಕ್ಕೂಟದ ಎಲ್ಲ ಸದಸ್ಯರು ಧಾರ್ಮಿಕ ಮನೋಭಾವವನ್ನು ಮಕ್ಕಳಿಗೆ ತಿಳಿಸುವ ಹಿನ್ನೆಲೆಯಲ್ಲಿ ಆಯಾ ಶಾಲೆಯಲ್ಲಿ ತಮ್ಮಲ್ಲಿರುವ ಲಭ್ಯ ವ್ಯವಸ್ಥೆಗೆ ಅನುಗುಣವಾಗಿ ಒಂದೂವರೆ ಘಂಟೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಬೇಕು. ರಜೆ ನೀಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ಒಂದು ವೇಳೆ ರಜೆ ನೀಡಿದರೆ ವಿದ್ಯಾರ್ಥಿಗಳು, ಆಟ ಅಥವಾ ಅನ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪ್ರಾಣ ಪ್ರತಿಷ್ಠೆ ಕಾರ್ಯ ಕ್ರಮವನ್ನು ನೋಡದಿರಬಹುದು ಎಂದು ಅವರು ಹೇಳಿದ್ದಾರೆ.