ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ..!
– ಅಯೋಧ್ಯೆಗೆ ಹೊರಟ ಭಕ್ತೆ ಶಬನಂ ಶೇಖ್..!
NAMMUR EXPRESS NEWS
ಮನಸ್ಸಿನಿಂದ ದೇವರ ಹುಡುಕುವವನಿಗೆ ಜಾತಿ, ಧರ್ಮ ಅಡ್ಡಿಯಾಗದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದು ಇತಿಹಾಸಿದಲ್ಲೂ ರುಜುವಾತಾಗಿದೆ. ಈಗ ಮತ್ತೆ ಇಂತಹದ್ದೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲೇ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ರಾಮನ ಕಣ್ತುಂಬಿಕೊಳ್ಳಲು ಇಡೀ ಭಕ್ತ ಸಮೂಹ ತುದಿಗಾಲಲ್ಲಿ ನಿಂತಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಮುಂಬರುವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 22 ರಂದು ದೇವಾಲಯವನ್ನು ಅನಾವರಣಗೊಳಿಸಲಿದ್ದು, ಅದರ ಪವಿತ್ರ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಇರಿಸಲಾಗಿದೆ. ರಾಮಮಂದಿರ ಟ್ರಸ್ಟ್ನಿಂದ ಸಾವಿರಾರು ಗಣ್ಯರಿಗೆ ಆಹ್ವಾನ ಬಂದಿದ್ದು,
ಸಿದ್ಧತೆಗಳು ಭರದಿಂದ ಸಾಗಿವೆ. ಈ ಉತ್ಸಾಹದ ನಡುವೆ, ಮುಂಬೈನಿಂದ ಬಂದ ಮುಸ್ಲಿಂ ಯುವತಿ ಭಗವಾನ್ ರಾಮನ ದರ್ಶನಕ್ಕಾಗಿ ಹಂಬಲಿಸುತ್ತಾ ಅಯೋಧ್ಯೆಗೆ ಯಾತ್ರೆ ಆರಂಭಿಸಿರುವುದು ಭಾರೀ ಸದ್ದು ಮಾಡ್ತಿದೆ. ಇದು ಧರ್ಮಗಳ ಆಚೆಗಿನ ಭಕ್ತಿಯ ಸಾರವಾಗಿದೆ. ಆಕೆ ರಾಮನ ಭಕ್ತಿಯಾಗಿದ್ದು, ಬರೋಬ್ಬರಿ 1,425 ಕಿ.ಮೀ ದೂರ ಸಾಗಿ ರಾಮನ ದರ್ಶನ ಪಡೆಯಲು ಮುಂದಾಗಿದ್ದಾಳೆ. ರಾಮನ ಕಟ್ಟಾ ಭಕ್ತಿ ಮತ್ತು ಸ್ವಯಂ ಘೋಷಿತ ಸನಾತನಿ ಶಬನಂ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಶ್ರೀರಾಮನ ಬ್ಯಾನರ್ ಹಿಡಿದು ನೂರು ಕಿಲೋಮೀಟರ್ ದಾಟಿದ್ದಾರೆ. ದಾರಿಯುದ್ದಕ್ಕೂ ಶ್ರೀರಾಮನ ಭಕ್ತರೊಂದಿಗೆ ಆಕೆ ಮುಖಾಮುಖಿ ಮಾತುಕತೆ ಹಾಗೂ ದಾರಿಯುದ್ದಕ್ಕೂ ಆಕೆಯ ಜೈಶ್ರೀರಾಮ್ ಘೋಷಣೆಯ ವಿಡಿಯೋಗಳು ಈಗ ವೈರಲ್ ಆಗ್ತಿವೆ. ಈ ಎಲ್ಲಾ ವಿಡಿಯೋಗಳನ್ನು ಹಾಗೂ ಆಕೆ ಭೇಟಿಯಾದ ಭಕ್ತರ ಕುರಿತಾದ ವಿಚಾರಗಳನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಆಕೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಕೇಳಿಬಂದಿದೆ.