ಎಲ್ಲಾ ಫೋನ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ಎಚ್ಚರಿಕೆ
– ಈ ನಂಬರ್ ಡಯಲ್ ಮಾಡಲೇಬೇಡಿ!
– ಕರೆ ಫಾರ್ವಡ್ ಆಗಲು ಬಿಡಬೇಡಿ!
– ಕರೆ ಫಾರ್ವರ್ಡ್ ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
NAMMUR EXPRESS NEWS
ನವದೆಹಲಿ: ಫೋನ್ ಗಳ ಬಳಕೆ ಮತ್ತು ಫೋನ್ ಗಳ ಸಂಖ್ಯೆ ಎರಡೂ ಇತ್ತೀಚಿನ ದಿನಗಳಲ್ಲಿ ಅಗತ್ಯವೂ ಅನಿವಾರ್ಯವೂ ಆಗಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ತಾಪತ್ರಯಗಳೂ ಕೂಡ ಇದೇ ಫೋನ್ ಗಳಿಂದ ಸಂಭವಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಇದಕ್ಕೆ ಫೋನ್ಗಳೂ ಸಹ ನೇರ ಕಾರಣ ಆಗಿವೆ. ಇದನ್ನು ತಡೆಯಲು ಹಾಗೂ ಈ ಸಂಬಂಧ ಜನರಿಗೆ ಎಚ್ಚರಿಕೆ ಮೂಡಿಸುವ ಹಲವಾರು ಕೆಲಸಗಳು ಸರ್ಕಾರದಿಂದ ಅಥವಾ ಸಂಬಂಧಿಸಿದ ಅಧಿಕಾರಿಗಳಿಂದ ಆಗುತ್ತಿದೆ.
ಅದಾಗ್ಯೂ ಮೋಸದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕೆ ಸರ್ಕಾರ ಈಗ ಈ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಸರ್ಕಾರ ನೀಡಿದ ಎಚ್ಚರಿಕೆ ಏನು?, ನಿಮ್ಮ ಫೋನ್ನಲ್ಲಿ ಏನೆಲ್ಲಾ ಮಾಡಬೇಕು ಅನ್ನೋ ಅಗತ್ಯ ಮಾಹಿತಿ ಇಲ್ಲಿದೆ ನೋಡಿ. ಭಾರತ ಸರ್ಕಾರದಿಂದ ಎಚ್ಚರಿಕೆ: ಕರೆ ಫಾರ್ವಡ್ ಮಾಡುವ ಮೂಲಕ ಜನರನ್ನು ವಂಚನೆ ಮಾಡುವ ಜಾಲ ಈಗ ಎಲ್ಲಾ ಕಡೆ ವ್ಯಾಪಿಸಿದೆ ಎನ್ನಲಾಗಿದೆ. ಅಂದರೆ ಈ ಕರೆ ಸೌಲಭ್ಯ ಬಳಕೆ ಮಾಡಿಕೊಂಡು ಸೈಬರ್ ಅಪರಾಧಿಗಳು ಓಟಿಪಿ ವಿನಂತಿಗಳ ಮೂಲಕ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವ ಕೆಲಸ ಮಾಡಲು ಮುಂದಾಗಿದ್ದಾರೆ. ಜೊತೆಗೆ ವಿವಿಧ ಪ್ರಕರಣಗಳಲ್ಲಿ ಈ ಕೃತ್ಯವನ್ನೂ ಈಗಾಗಲೇ ಮಾಡಿದ್ದಾರೆ.
‘*401 #’ ಅನ್ನು ಡಯಲ್ ಮಾಡಲು ಜನರಿಗೆ ಕೇಳುತ್ತಿದ್ದು, ಇದು ಕರೆ ಫಾರ್ವಡ್ ಮಾಡುವ ಸಂಖ್ಯೆಯಾಗಿದೆ. ಹಲವಾರು ಜನರಿಗೆ ಇದರ ಬಗ್ಗೆ ಮಾಹಿತಿ ಇದ್ದು ಇನ್ನೂ ಹಲವಾರು ಜನರು ಇದರ ಬಗ್ಗೆ ತಿಳಿಯುವ ಅಗತ್ಯ ಇದೆ. ಇದರಿಂದ ಭಾರತದಲ್ಲಿನ ಲಕ್ಷಾಂತರ ಮೊಬೈಲ್ ಫೋನ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ. ಅಪರಿಚಿತ ಸಂಖ್ಯೆಯೊಂದಿಗೆ ‘*401 #’ ಅನ್ನು ಡಯಲ್ ಮಾಡಲು ಸೂಚಿಸುವ ಕರೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಸೂಚಿಸಲಾಗಿದೆ. ಅದರಲ್ಲೂ ನಿರ್ಧಿಷ್ಟವಾಗಿ ಏರ್ಟೆಲ್, ಜಿಯೋ, ವೊಡಾಫೋನ್-ಐಡಿಯಾ ಮತ್ತು ಬಿಎಸ್ಎನ್ಎಲ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದ್ದು, ಅಕ್ಟೋಬರ್ನಲ್ಲಿ ‘*401#’ ಕರೆ ಫಾರ್ವಡ್ ಮಾಡುವ ಹಗರಣದ ಸಂಖ್ಯೆ ಹೆಚ್ಚಾದ ಹಿನ್ನೆಲೆ ಈ ಸೂಚನೆ ಬಂದಿದೆ. ಇನ್ನು ವಂಚನೆ ಮಾಡಲು ಡೆಲಿವರಿ ಏಜೆಂಟ್ಗಳು, ಬ್ಯಾಂಕ್ ಪ್ರತಿನಿಧಿಗಳು ಅಥವಾ ಸೇವಾ ಪೂರೈಕೆದಾರರು ಎಂದು ಹೇಳಿಕೊಂಡು ಜನರನ್ನು ಸ್ಕ್ಯಾಮರ್ಗಳು ಸಂಪರ್ಕ ಮಾಡುತ್ತಾರೆ.
ಸೈಬರ್ ಕ್ರಿಮಿನಲ್ಗಳ ಕಾರ್ಯಾಚರಣೆಯ ವಿಧಾನದ ಬಗ್ಗೆ ತಿಳಿಸುವುದಾದರೆ ಹೆಚ್ಚಾಗಿ ಇವರು ಬ್ಯಾಂಕ್ ಏಜೆಂಟ್ಗಳು ಅಥವಾ ಟೆಲಿಕಾಂ ಬೆಂಬಲ ಪ್ರತಿನಿಧಿಗಳಂತೆ ವರ್ತಿಸುವ ಕೆಲಸ ಮಾಡುತ್ತಾರೆ. ನೆಟ್ವರ್ಕ್ ಸಮಸ್ಯೆ ಅಥವಾ ಬೇರೆ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಆ ವೇಳೆ ಸಮಸ್ಯೆ ಬಗೆಹರಿಯಬೇಕು ಎಂದರೆ ‘*401#’ ಅನ್ನು ಡಯಲ್ ಮಾಡಲು ಹೇಳುತ್ತಾರೆ. ಅವರು ಏನು ಹೇಳಿದ್ದಾರೋ ಅದನ್ನು ನೀವು ಅನುಸರಿಸಿದ್ದೀರಿ ಎಂದಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಮಂಗಮಾಯ ಆದಂತೆ. ಈ ರೀತಿ ಮಾಡುವುದರಿಂದ ನಿಮ್ಮ ನಂಬರ್ಗೆ ಬರುವ ಕರೆಗಳೆಲ್ಲಾ ಸ್ಕ್ಯಾಮರ್ ನಂಬರ್ಗೆ ಹೋಗುತ್ತವೆ.
ಅಂದರೆ ಈ ಕ್ರಮದಿಂದ ವಂಚಕನಿಗೆ ಎಲ್ಲಾ ಒಳಬರುವ ಕರೆಗಳನ್ನು ಸ್ವೀಕರಿಸಲು ಅನುಮತಿಸಲಿದ್ದು, ಮುಂದೆ ಅವರು ಎಲ್ಲಾ ರೀತಿಯಲ್ಲೂ ವಂಚನೆ ಮಾಡಲು ಬಳಕೆ ಮಾಡುತ್ತಾರೆ ಎಂದು DoT ತನ್ನ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ. ಅಂತಹ ಸೇವಾ ಕರೆಗಳನ್ನು ನಿರ್ಲಕ್ಷಿಸಿ ಎಂದು ಈ ಮೂಲಕ ಜನರಿಗೆ ತಿಳಿಸಿದೆ. ಕರೆ ಫಾರ್ವಡ್ ಮಾಡುವುದನ್ನು ತಡೆಯುವುದು ಹೇಗೆ?: ಇಂತಹ ವಂಚನೆಗಳಿಂದಾಗಿ ಬಳಕೆದಾರರು ತಿಳಿಯದೆ ಕರೆ ಫಾರ್ವಡ್ ಮಾಡುವಿಕೆಯನ್ನು ಸಕ್ರಿಯಗೊಳಿಸಿದ್ದೇ ಆದರೆ ಅದನ್ನು ತ್ವರಿತವಾಗಿ ನಿಷ್ಕ್ರಿಯಗೊಳಿಸುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಇದಕ್ಕೆ ಬಳಕೆದಾರರು ಫೋನ್ ಸೆಟ್ಟಿಂಗ್ಗಳಿಗೆ ಹೋಗಬೇಕು. ನಂತರದಲ್ಲಿ ಅಲ್ಲಿ ಕರೆ ಸೆಟ್ಟಿಂಗ್ಗಳಿಗೆ ನ್ಯಾವಿಗೇಟ್ ಮಾಡಿ. ಬಳಿಕ ಕರೆ ಫಾರ್ವಡ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ ಅಥವಾ ಡೀಫಾಲ್ಟ್ ಸೆಟ್ಟಿಂಗ್ಗಳನ್ನು ರೀಸ್ಟೋರ್ ಮಾಡಿ.