ತೂಕ ಇಳಿಸದೇ ಭಾರತಕ್ಕೆ ಮಿಸ್ ಆಯ್ತು ಚಿನ್ನ!
– ಭಾರತಕ್ಕೆ ಒಲಿಂಪಿಕ್ಸಲ್ಲಿ ಶಾಕ್: ಚಿನ್ನದ ಕನಸು ಭಗ್ನ!
– ಕುಸ್ತಿ ಫೈನಲ್ನಲ್ಲಿ ವಿನೇಶ್ ಫೋಗಟ್ ಅನರ್ಹ
– 100 ಗ್ರಾಂ ಹೆಚ್ಚಿನ ತೂಕ ಇದ್ದುದ್ದಕ್ಕೆ ಅನರ್ಹ
NAMMUR EXPRESS NEWS
ಪ್ಯಾರೀಸ್ : ಇಡೀ ಭಾರತದ ನೂರು ಕೋಟಿ ಜನ ಕನಸು ಕಂಡಿದ್ದ ಭಾರತದ ಕುಸ್ತಿ ವಿಭಾಗದ ಚಿನ್ನದ ಪದಕ ಕನಸು ಆಗಿಯೇ ಉಳಿದಿದೆ.
ತೂಕ ಇಳಿಸದೇ ಕುಸ್ತಿ ಫೈನಲ್ನಲ್ಲಿ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. 100 ಗ್ರಾಂ ಹೆಚ್ಚಿನ ತೂಕ ಇದ್ದುದ್ದಕ್ಕೆ ಅನರ್ಹಗೊಳಿಸಲಾಗಿದೆ.
ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ. ವಾಸ್ತವವಾಗಿ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ ಅವರ ತೂಕವು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ. ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟುವಿಗೆ ಯಾವುದೇ ವಿಭಾಗದಲ್ಲಿ 100 ಗ್ರಾಂ. ಹೆಚ್ಚುವರಿ ತೂಕದ ಭತ್ಯೆ ನೀಡಲಾಗುತ್ತದೆ. ಆದರೆ ವಿನೇಶ್ ಅವರ ತೂಕ ಇದಕ್ಕಿಂತ ಹೆಚ್ಚಿದೆ. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಫೈನಲ್ ಸ್ಪರ್ಧೆಗೂ ಮುನ್ನ ವಿನೇಶ್ ಫೋಗಟ್ ಅನರ್ಹಗೊಂಡಿರುವುದರಿಂದಾಗಿ ಇದೀಗ 50 ಕೆ.ಜಿ. ವಿಭಾಗದಲ್ಲಿ ಯಾವುದೇ ಕುಸ್ತಿಪಟು ಬೆಳ್ಳಿ ಪದಕ ಪಡೆಯಲು ಸಾಧ್ಯವಾಗುವುದಿಲ್ಲ. ಉಳಿದಂತೆ ಈ ವಿಭಾಗದಲ್ಲಿ ವಿನೇಶ್ ಅವರೊಂದಿಗೆ ಫೈನಲ್ನಲ್ಲಿ ಸ್ಪರ್ಧಿಸಬೇಕಿದ್ದ ಅಮೆರಿಕದ ಕುಸ್ತಿಪಟುಗೆ ಚಿನ್ನದ ಪದಕ ಸಿಗಲಿದೆ.