- ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ವರ್ಚಸ್ಸು ಫೇಲ್
- ಇತಿಹಾಸದ ಪಕ್ಷಕ್ಕೆ ಮುಳುವಾಯಿತೇ ಹಳೆ ತಂತ್ರಗಾರಿಕೆ?!
- ಯುವ ಜನತೆಗಿಲ್ಲ ಅವಕಾಶ: ನಾಯಕರ ಒಳಪೆಟ್ಟು
- ಫಲ ನೀಡದ ಓಭಿರಾಯನ ಕಾಲದ ಪ್ಲಾನ್
- ಆಮ್ ಆದ್ಮಿ ಪಾರ್ಟಿಗಿಂತ ಕಡಿಮೆ ಸ್ಥಾನ
NAMMUR EXPRESS NEWS
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಜೊತೆಗೆ ಪಕ್ಷದ ವರ್ಚಸ್ಸು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ್ ಅಲ್ಲಿ ಜನರಿಂದ ದೂರವಾದ ಪಕ್ಷ ಗೋವಾದಲ್ಲಿ ಅಧಿಕಾರ ಹಿಡಿಯುವ ಕನಸು ಕಂಡಿದ್ದರೂ ಕಾಂಗ್ರೆಸ್ಗೆ ಮತದಾರರು ಶಾಕ್ ನೀಡಿದ್ದಾರೆ. ಪಂಜಾಬ್ನಲ್ಲಿ ಪಕ್ಷದ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಮುಖ್ಯಮಂತ್ರಿಯಾಗಿದ್ದ ಚರಣ್ಜಿತ್ ಸಿಂಗ್ ಚೆನ್ನಿ ಮತ್ತು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೋತಿದ್ದು, ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗುವಂತೆ ಮಾಡಿದೆ. ಇನ್ನು 117 ಸ್ಥಾನಗಳ ಪೈಕಿ 18 ಸ್ಥಾನ ಪಡೆದಿದೆ. ಆಪ್ 92 ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೆಸರೇ ಇಲ್ಲದಾಗಿದೆ. ನೂರಾರು ರ್ಯಾಲಿ, ಮೆರವಣಿಗೆ, ಪ್ರಿಯಾಂಕಾ, ರಾಹುಲ್ ಪ್ರಚಾರ ಟುಸ್ ಆಗಿದೆ. ಪಂಚರಾಜ್ಯಗಳಲ್ಲಿಯೂ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, “ಪಂಚರಾಜ್ಯಗಳ ಪೈಕಿ ನಾವು ಅಧಿಕಾರದಲ್ಲಿ ಇದ್ದಿದ್ದು ಪಂಜಾಬ್ನಲ್ಲಿ ಮಾತ್ರ. ಇನ್ನು ಗೋವಾದಲ್ಲಿ ಅಧಿಕಾರಕ್ಕೇರುವ ಆಸೆ ಇಟ್ಟುಕೊಂಡಿದ್ದೇವು.ಉಳಿದ ಮೂರು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೇರುವ ಯಾವ ಸಾಹಸವನ್ನು ಮಾಡಿಲ್ಲ. ಯಾಕೆಂದರೆ, ನಾವು ಆ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ನಾವು ಕಳೆದುಕೊಂಡಿದ್ದು, ಪಂಜಾಬ್ ಅನ್ನು ಮಾತ್ರ ಎಂದಿದ್ದಾರೆ.
ಹತಾಶೆ: ಕಾಂಗ್ರೆಸ್ ನಾಯಕರ ಹತಾಶೆ ಎದ್ದು ಕಾಣುತ್ತಿದೆ. ಹಳೆ ಕಾಲದ ಪ್ಲಾನ್, ಸೊರಗಿದ ಸಂಘಟನೆ, ಯುವ ಮುಖಗಳಿಗೆ ನೀಡದ ಸ್ಥಾನಮಾನ, ತಂತ್ರಗಾರಿಕೆ ಇಲ್ಲದ ಕಾರಣ ಕಾಂಗ್ರೆಸ್ ನೆಲಕಚ್ಚಿದೆ.
ದೇಶದಲ್ಲಿ ಎರಡೇ ಕಡೆ ಅಧಿಕಾರ!
ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮಂಕಾಗುತ್ತಿರುವುದು ಸ್ಪಷ್ಟವಾಗಿದೆ. ನಿರ್ಣಾಯಕ ಚುನಾವಣೆಯಲ್ಲೂ ಗೆಲ್ಲಲಾಗದೆ ಕೈಗೆ ಸಿಕ್ಕ ರಾಜ್ಯಗಳನ್ನೂ ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸರಿಯಾದ ನಾಯಕತ್ವ ಇಲ್ಲದೇ ಇರುವುದು ಮತ್ತು ಪಕ್ಷದೊಳಗಿನ ಸಂಘರ್ಷ ಪ್ರತಿ ರಾಜ್ಯದಿಂದ ಕಾಂಗ್ರೆಸ್ ಅನ್ನು ಅಳಿಸಿಹಾಕುತ್ತಿದೆ. ಪ್ರತಿಸ್ಪರ್ಧಿಗಳಿಲ್ಲದ ದೇಶದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿದ್ದ ಕಾಂಗ್ರೆಸ್ ಈಗ ಕೇವಲ ಎರಡು ರಾಜ್ಯಗಳಿಗೆ ಅಂದರೆ ರಾಜಸ್ಥಾನ ಮತ್ತು ಛತ್ತೀಸ್ಗಢಕ್ಕೆ ಸೀಮಿತವಾಗಿದೆ.
ಕಾಂಗ್ರೆಸ್ಸಿಗೆ ಮಾಸ್ ಲೀಡರ್ ಕೊರತೆ!
- ನಾಯಕತ್ವದಲ್ಲಿ ಕರ್ನಾಟಕವೇ ದೇಶದಲ್ಲಿ ಓಕೆ ಅಂತೆ..!
ದೇಶದಲ್ಲಿ ಬಹು ದೊಡ್ಡ ಪಕ್ಷದ ಅಧಪತನ ಶುರುವಾಗಿದೆ. ಎಲ್ಲಾ ಕಡೆ ಸೋಲುವ ಮೂಲಕ ಪಕ್ಷ ಕೆಟ್ಟ ಸ್ಥಿತಿಗೆ ಬಂದಿದೆ. ಆದರೆ ಕರ್ನಾಟಕದಲ್ಲಿ ಕೊಂಚ ಹುಮ್ಮಸ್ಸು ಕಾಣುತ್ತಿದೆ.
2017ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಕಾರ್ಯಕರ್ತರಲ್ಲಿ ಉತ್ಸಾಹ, ಭರವಸೆ ಮೂಡಿತ್ತು. ಆದರೆ 2019ರ ಚುನಾವಣೆಯಲ್ಲಿ ಆದ ಭಾರೀ ಹಿನ್ನಡೆಯ ಸಂಪೂರ್ಣ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಪಕ್ಷವನ್ನು ಅನಾಥವಾಗಿಸಿದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇರುವ ಹಿರಿಯ ಮತ್ತು ಕಿರಿಯ ನಾಯಕರನ್ನೂ ಒಗ್ಗೂಡಿಸಲು ಸಾಧ್ಯವಾಗದಿರುವುದು ಕಾಂಗ್ರೆಸ್ಸಿನ ಮತ್ತೊಂದು ದೊಡ್ಡ ಸಮಸ್ಯೆ. ಕಪಿಲ್ ಸಿಬಲ್, ಶಶಿ ತರೂರ್ ಮತ್ತು ಮನೀಶ್ ತಿವಾರಿ ಸೇರಿದಂತೆ ಪಕ್ಷದೊಳಗಿನ 23 ಹಿರಿಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್ಗೆ ಸ್ಪಷ್ಟ ಮತ್ತು ಸಕ್ರಿಯ ಅಧ್ಯಕ್ಷರನ್ನು ಹೊಂದಬೇಕೆಂದು ಪತ್ರದಲ್ಲಿ ಕರೆ ನೀಡಲಾಗಿತ್ತು. ಇದು ಪಕ್ಷದೊಳಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ದೇಶದ ಎಲ್ಲಾ ಕಡೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಮೂಲಕ ಪಕ್ಷ ಹಳಿ ತಪ್ಪುತ್ತಿದೆ. ಆದರೆ ಅದನ್ನು ಸರಿ ಮಾಡುವ ಸಮರ್ಥ ನಾಯಕತ್ವ ಬೇಕಿದೆ.
ಪ್ರಿಯಾಂಕಾ ಗಾಂಧಿಗೂ ಸೋಲಿನ ರುಚಿ!
- ಉತ್ತರ ಪ್ರದೇಶದಲ್ಲಿ ಕುಟುಂಬ ರಾಜಕೀಯ ನಡೆಯಲಿಲ್ಲ
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಯ್ಬರೇಲಿ ಗೆದ್ದು, ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋಲನ್ನು ಕಂಡಿದ್ದರು. ಇದಾದ ನಂತರ ಪ್ರಿಯಾಂಕಾ ಗಾಂಧಿ 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಕೇಂದ್ರವಾಗಿಟ್ಟುಕೊಂಡು, ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು. ಉತ್ತರ ಪ್ರದೇಶದಲ್ಲಿ ಬೇರು ಊರಬೇಕೆಂಬ ಅಸೆ ಕೊನೆಗೂ ಫಲಿಸಲಿಲ್ಲ.
ಪ್ರಿಯಾಂಕಾ ಗಾಂಧಿ 2 ವರ್ಷ ತಮ್ಮ ಬಹುತೇಕ ಸಮಯವನ್ನು ಉತ್ತರಪ್ರದೇಶದಲ್ಲೇ ಕಳೆದಿದ್ದಾರೆ. ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಮತ್ತು ಮಾಯಾವತಿಗಿಂತ ಹೆಚ್ಚಿನ ರ್ಯಾಲಿಗಳನ್ನು ಮತ್ತು ಸಭೆಗಳನ್ನು ನಡೆಸಿದ್ದಾರೆ. 204 ರ್ಯಾಲಿಗಳನ್ನು ಯೋಗಿ ಆದಿತ್ಯನಾಥ್ ನಡೆಸಿದ್ದರೆ, ಪ್ರಿಯಾಂಕಾ ಗಾಂಧಿ 209 ರ್ಯಾಲಿಗಳನ್ನು ನಡೆಸಿದ್ದರೂ ಬಿಜೆಪಿ 274, ಕಾಂಗ್ರೆಸ್ 2 ಸ್ಥಾನ ಗೆದ್ದಿದೆ.
ಫಲಿತಾಂಶ ಫೇಲ್: ಸಿದ್ದರಾಮಯ್ಯ ನೋವಿನ ಮಾತು..!
- ಅನ್ನ, ಉದ್ಯೋಗ, ಬದುಕಿಗಿಂತ ಕೋಮುವಾದವೇ ಗೆದ್ದಿತು
ಚುನಾವಣೆಗಳ ಫಲಿತಾಂಶ ಎನ್ನುವುದು ಜನತೆಯ ಅಭಿಪ್ರಾಯವನ್ನು ಅರಿತುಕೊಳ್ಳಲು ಇರುವ ಅವಕಾಶ. ಅದನ್ನು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರೆಲ್ಲರೂ ಗೌರವಿಸಬೇಕು. ನಾನು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ, ಈ ಹಿನ್ನಡೆಯ ಬಗ್ಗೆ ನಮ್ಮ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಬೇಕು. ಆದರೆ ಉತ್ತರ ಪ್ರದೇಶದಲ್ಲಿ ಕೆಲಸ ಮಾಡದವರಿಗೆ ಕೂಲಿ ಕೊಟ್ಟಿದ್ದಾರೆ. ಉತ್ತರಪ್ರದೇಶ ಇಡೀ ದೇಶದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಜ್ಯ. ಕೊರೊನಾ ಕಾಲದಲ್ಲಿ ಗಂಗಾನದಿಯಲ್ಲಿ ಶವಗಳು ತೇಲಿಹೋಗಿರುವುದನ್ನು ಇಡೀ ದೇಶ ನೋಡಿದೆ.
ಉತ್ತರಪ್ರದೇಶದಿಂದ ಉದ್ಯೋಗ ಅರಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತಾರೆ. ಕೊರೊನಾ ಕಾಲದಲ್ಲಿ ಇವರೆಲ್ಲ ಉದ್ಯೋಗ ಕಳೆದುಕೊಂಡು ಮರಳಿ ಆ ರಾಜ್ಯಕ್ಕೆ ಹೋದರು. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ನಿರುದ್ಯೋಗ ರಾಜ್ಯದಲ್ಲಿದೆ.
ಹೀಗಿದ್ದರೂ ಅಲ್ಲಿನ ಜನ ಬಿಜೆಪಿ ಗೆಲ್ಲಿಸಲು ಮುಖ್ಯ ಕಾರಣ ಅಲ್ಲಿ ಬಿಜೆಪಿ ಮಾಡುತ್ತಾ ಬಂದ ಕೋಮು ಆಧಾರದ ಧ್ರುವೀಕರಣ. ಯೋಗಿ ಆದಿತ್ಯನಾಥ್ ತನ್ನ ಪ್ರಚಾರದಲ್ಲಿ ಈ ಚುನಾವಣೆ ಎನ್ನುವುದು 80 ವರ್ಸಸ್ 20ರ ನಡುವಿನ ಚುನಾವಣೆ ಎಂದು ಹೇಳುವ ಮೂಲಕ ಇದು ಹಿಂದು- ಮುಸ್ಲಿಮರ ನಡುವಿನ ಚುನಾವಣೆ ಎಂಬ ಅಭಿಪ್ರಾಯವನ್ನು ಮೂಡಿಸಿದ್ದರು.
ಜನರ ತಲೆಗೆ ಒಮ್ಮೆ ಕೋಮು ವಿಷ ತುಂಬಿದರೆ ಅವರಿಗೆ ನಿರುದ್ಯೋಗ, ಹಸಿವು, ಅನಾರೋಗ್ಯ, ಅಭಿವೃದ್ದಿಯ ಕೊರತೆಗಳು, ಈಡೇರದ ಭರವಸೆಗಳು ಎಲ್ಲವೂ ಮರೆತು ಹೋಗುತ್ತದೆ. ಉತ್ತರಪ್ರದೇಶದಲ್ಲಿ ಈ ಬೆಳವಣಿಗೆ ಅತ್ಯಂತ ಕಳವಳಕಾರಿಯಾದುದು ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿಯಾದುದು.
ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ಗೇಲಿಮಾಡಿದವರು, ಇದರಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ ಎಂದು ಟೀಕಿಸಿದ ಬಿಜೆಪಿ ನಾಯಕರು ಉತ್ತರಪ್ರದೇಶದ ಮುಖ್ಯಮಂತ್ರಿಗಳು ಕಳೆದ ಒಂದು ವರ್ಷದಿಂದ ನೀಡುತ್ತಿರುವ ಉಚಿತ ಪಡಿತರವನ್ನು ಹಾಡಿ ಹೊಗಳುತ್ತಿದ್ದಾರೆ. ಇದು ಬಿಜೆಪಿಯ ಹಿಪಾಕ್ರಸಿ.
ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದೂ ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.
ಸಿಧು, ಸಿದ್ದು ಟ್ರೋಲ್ಸ್..!
ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಪರಿಣಾಮ ಟ್ರೋಲ್ ಹಾವಳಿಯೂ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡುವಂತ ಟ್ರೋಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು, ಹೀನಾಯವಾಗಿ ಸೋಲಲು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕಾರಣ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ. ಸಿಧು ತಂದಿಟ್ಟ ಒಳಜಗಳಿಂದಲೇ ಕಾಂಗ್ರೆಸ್ ಹಾಳಾಗಿದೆ. ಇಲ್ಲಿ ಸಿದ್ದರಾಮಯ್ಯ ಅವರಿಗೆ ಇದೇ ಸ್ಥಿತಿ ಬರಲಿದೆ ಎಂದೂ ಕೆಲವರು ಟ್ರೊಲ್ ಮಾಡುತ್ತಿದ್ದಾರೆ.
ಇವಿಎಂ ಬ್ಯಾನ್ ಮಾಡಲು ಕಾಂಗ್ರೆಸ್ ಪಟ್ಟು
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಹಾಗೂ ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದ್ದು, ಐದು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ ದೆಹಲಿಯಲ್ಲಿ ಪಕ್ಷದ ಕಚೇರಿಯ ಮುಂದೆ ಇವಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಇವಿಎಂ ಬ್ಯಾನ್ ಮಾಡಬೇಕು ಎಂದೂ ಪಟ್ಟು ಹಿಡಿದಿದ್ದಾರೆ.