- ಸಂತೋಷ್ ಜೀ ಭೇಟಿ ಮಾಡಿದ ಜಾರಕಿಹೊಳಿ
- ಕರಾವಳಿ ನಾಯಕನಿಗೆ ಸಿಎಂ ಹುದ್ದೆ: ವದಂತಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ಸರ್ಕಸ್ ಇನ್ನೂ ಮುಗಿಯುವ ಹಾಗೆ ಕಾಣುತ್ತಿಲ್ಲ. ಇಲ್ಲಿ ಜನ ಕರೋನದ ಎಫೆಕ್ಟ್ನಿಂದ ಸಾಯುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ಬಂದಿದ್ದು, ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಕ್ಲೈಮಾಕ್ಸ್ ಸುಳಿವು ನೀಡಿದ್ದಾರೆ. ಆದರೆ ಯಾರಿಗೆ ಸ್ಥಾನ ಸಿಗುತ್ತೆ ಎಂಬ ಕುತೂಹಲ ಬಿಟ್ಟು ಕೊಟ್ಟಿಲ್ಲ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸದ್ಯದಲ್ಲಿಯೇ ಹೊಸ ಸಚಿವರು ಯಾರು? ಯಾರಿಗೆ ಯಾವ ಖಾತೆ ಎನ್ನುವುದು ಗೊತ್ತಾಗಲಿದೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ರೇಣುಕಾಚಾರ್ಯ ಸಭೆ ನಡೆಸಿದರ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲಾ ಶಾಸಕರು ಸೇರಿ ಸಭೆ ನಡೆಸುವುದು ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಬುಧವಾರ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 20 ನಿಮಿಷಗಳ ಕಾಲ ಚರ್ಚೆ ನಡೆಸಿ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.
ಯಡಿಯೂರಪ್ಪ ಅವರು ನಡ್ಡಾ ಅವರಿಗೆ ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ್ದಾರೆ. ಜೊತೆಗೆ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಆದರೆ ಹೈಕಮಾಂಡ್ ವರಿಷ್ಠರು ಇನ್ನು ಯಾವುದೇ ಅಂತಿಮ ತೀರ್ಮಾನವನ್ನು ತಿಳಿಸಿಲ್ಲ
ಜಾರಕಿಹೊಳಿ ಭೇಟಿ: ಹಿರಿಯ ನಾಯಕ ಸಂತೋಷ್ ಜೊತೆಗೆ ರಮೇಶ್ ಜಾರಕಿಹೊಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿ ಯೋಗೀಶ್ವರ್ ಹಾಗೂ ಇತರರಿಗೆ ಸಚಿವ ಸ್ಥಾನವನ್ನು ಕೊಡಿಸುವ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗಿದೆ.
ವದಂತಿ: ಕರಾವಳಿಯ ನಾಯಕರೊಬ್ಬರು ಸಿಎಂ ಆಗ್ತಾರೆ ಎಂಬ ವದಂತಿ ಕರಾವಳಿ ಭಾಗದಲ್ಲಿ ಹಬ್ಬಿದೆ. ಕೇಂದ್ರ ಸಚಿವ ಸದಾನಂದ ಗೌಡರೋ…ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೋ ಎಂಬ ಬಗ್ಗೆ ಚರ್ಚೆ ಎದ್ದಿದೆ. ಆದರೆ ಇದು ವದಂತಿ ಎಂಬ ಮಾತು ಕೇಳಿ ಬಂದಿದೆ.