- ಕೇಕ್ ತಿನ್ನಿಸಿ ಸಂಭ್ರಮ ಆಚರಿಸಿದ ಎಲ್ಲಾ ನಾಯಕರು
- ಡಿಕೆಶಿ, ಹರಿಪ್ರಸಾದ್ ಸೇರಿ ಬಹುತೇಕ ನಾಯಕರು ಹಾಜರ್
NAMMUR EXPRESS NEWS
ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ 75ನೇ ಜನ್ಮದಿನಾಚರಣೆಯನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಂಗಳವಾರ ತಡ ರಾತ್ರಿಯೇ ಇಲ್ಲಿನ ವಿಮಾನ ನಿಲ್ದಾಣದ ಎದುರಿಗೆ ಇರುವ ಫಾರ್ಚೂನ್ ಹೊಟೇಲ್ ನಲ್ಲಿ ಆಚರಿಸಿ ಸಂಭ್ರಮಿಸಿದರು.
ಸಿದ್ಧರಾಮಯ್ಯ ಅವರು ಕೇಕ್ ಕತ್ತರಿಸುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ಧರಾಮಯ್ಯ ಅವರಿಗೆ ಕೇಕ್ ತಿನಿಸಿ ಜನ್ಮದಿನ ಶುಭಾಶಯ ಕೋರಿದರು.
ಎಲ್ಲರೂ ಹ್ಯಾಪಿ ಬರ್ತ್ ಡೇ ಎಂದು ಶುಭಾಶಯ ಕೋರುತ್ತಿರುವಾಗಲೇ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಯುನಿಟಿ ಕೇಕ್ ಎಂದು ಹೇಳುವ ನಗೆ ಚಟಾಕಿ ಹಾರಿಸಿದರು.
ಪಕ್ಷದ ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ , ಮಾಜಿ ಸಚಿವ ಎಂ.ಬಿ ಪಾಟೀಲ್ , ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಸೇರಿದಂತೆ ಅನೇಕ ಮುಖಂಡರಿದ್ದರು.
ದಾವಣಗೆರೆಯಲ್ಲಿ ಸಿದ್ಧರಾಮೋತ್ಸವ ಕಾರ್ಯಕ್ರಮಕ್ಕೂ ಮುನ್ನವೇ ಸಿದ್ಧರಾಮಯ್ಯ ಅವರಿಗೆ ಅವರ ರಾಜಕೀಯ ಒಡನಾಡಿಗಳು ಹೊಟೇಲ್ ನಲ್ಲಿ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.