- ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯ
NAMMUR EXPRESS NEWS
ಬೆಂಗಳೂರು : ಚಾಲಕರ ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಪದೇ ಪದೇ ತಡೆದು ನಿಲ್ಲಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಹಿಂದಿನ ಆದೇಶವನ್ನು ಪಾಲನೆ ಮಾಡದೆ ವಾಹನ ಚಾಲಕರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ಅಂಥವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ಈ ಆದೇಶ ಅನ್ವಯವಾಗಲಿದೆ, ಇದರನ್ವಯ ಮದ್ಯಪಾನ ಸೇವಿಸಿ ಯಾರಾದರೂ ವಾಹನ ಚಾಲನೆ ಮಾಡುವುದು ಕಂಡು ಬಂದರೆ ಅಂತಹ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು, ಉಳಿದಂತೆ ದಾಖಲೆಗಳ ಪರಿಶೀಲನೆ ನೆಪದಲ್ಲಿ ಸಾರ್ವಜನಿಕರಿಗೆ ಪದೇ ಪದೇ ತೊಂದರೆ ಕೊಟ್ಟರೆ ಆದೇಶ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡದಿದ್ದರೂ ಸಂಚಾರಿ ಪೊಲೀಸ್ ಸುಖ ಸುಮ್ಮನೆ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಲು ಮುಂದಾಗುತ್ತಿದ್ದರು ಎಂಬ ಆರೋಪವಿದೆ, ಕೆಲ ದಿನಗಳ ಹಿಂದೆ ಮಧ್ಯಪಾನ ಮಾಡಿ ವಾಹನ ಚಲಾಯಿಸುವವರು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಾಹನಗಳನ್ನು ಮಾತ್ರ ತಪಾಸಣೆ ಮಾಡಿ, ಸುಖ ಸುಮ್ಮನೆ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ವಾಹನ ತಪಾಸಣೆ ಮಾಡದಂತೆ ಸೂದ್ ಸೂಚಿಸಿದ್ದರು.