- ಕರ್ನಾಟಕ ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ
- ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ
- ಸ್ಟಾರ್ಟ್ ಆಪ್ ಕಂಪನಿಗಳಿಗೆ ನೆರವು ನೀಡಿ..!
NAMMUR EXPRESS NEWS
ಬೆಂಗಳೂರು: ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಎಲ್ಲಾ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೆ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ. ಆದ್ರೆ ಉದ್ಯೋಗದಾತ ಸಣ್ಣ ಕಂಪನಿಗಳಿಗೆ ಸರ್ಕಾರದ ನೆರವು ಏನೂ ಸಾಲದಾಗಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು, ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.2.5 ರಿಂದ ಶೇ 3 ರಷ್ಟು ಆಗಲಿದೆ.
ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆಯ ಪ್ರಮಾಣದ ಆಧಾರದ ಮೇಲೆ ಮಧ್ಯಮ ಬೃಹತ್ ಆಲ್ಟ್ರಾ ಮೆಗಾ ಮತ್ತು ಸೂಪರ್ ಮೆಗಾ ಕೈಗಾರಿಕೆಗಳೆಂದು ವರ್ಗೀಕರಿಸಲಾಗಿದೆ, ಹೂಡಿಕೆ ವಿಸ್ತರಣೆಯ ಸಂದರ್ಭದಲ್ಲಿ ಹೂಡಿಕೆ ಮೊತ್ತದ ಆಧಾರದಲ್ಲಿ ಹೆಚ್ಚುವರಿ ಯಾಗಿ ಎಷ್ಟು ಹುದ್ದೆಗಳನ್ನು ಸೃಷ್ಟಿ ಮಾಡಬೇಕು ಎಂಬ ಸಂಖ್ಯೆಗಳನ್ನು ನೀತಿಯಲ್ಲಿ ಸೂಚಿಸಲಾಗಿದೆ ಎಂದರು.
ಕನ್ನಡಿಗರು ಅಥವಾ ಸ್ಥಳೀಯರಿಗೆ ಎ ಬಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಉದ್ಯೋಗ ನೀಡಬೇಕು. ಈ ಹಿಂದೆ ಕೇವಲ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ನೀಡಲಾಗುತ್ತಿತ್ತು, ಇನ್ನು ಮುಂದೆ ಎ ಮತ್ತು ಬಿ ದರ್ಜೆಗಳ ಉದ್ಯೋಗ ನೀಡುವುದು ಕಡ್ಡಾಯ, ಉದ್ಯೋಗ ನೀಡುವ ಸಂಬಂಧ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸರ್ಕಾರವೇ ಪರಿಶೀಲನೆ ನಡೆಸುತ್ತದೆ ಎಂದು ಮಾಧುಸ್ವಾಮಿ ಹೇಳಿದರು.
ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ: ಮಧ್ಯಮ ಗಾತ್ರದ ಉದ್ಯಮಗಳು ಪ್ರತಿ ₹10 ಕೋಟಿ ಹೂಡಿಕೆಯ ಮೇಲೆ ಏಳು ಉದ್ಯೋಗಗಳ ಬದಲಿಗೆ 10 ಉದ್ಯೋಗಗಳನ್ನು ಸೃಷ್ಟಿಸಬೇಕು. ಅಂದರೆ ಪ್ರತಿ ₹10 ಕೋಟಿ ಉದ್ಯಮಕ್ಕೆ ಇನ್ನು ಮುಂದೆ ತಲಾ ಹತ್ತು ಉದ್ಯೋಗಗಳನ್ನು ಸೃಷ್ಟಿಸಬೇಕು.
ಬೃಹತ್ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗದ ಮಿತಿಯನ್ನು 50 ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ತಿಳಿಸಿದರು.
ಮೆಗಾ ಉದ್ಯಮಗಳಲ್ಲಿ ಕನಿಷ್ಠ ಉದ್ಯಮಗಳ ಮಿತಿಯನ್ನು 200 ರಿಂದ 260 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು.
ಅಲ್ಟ್ರಾ ಮೆಗಾ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 400 ರಿಂದ 510 ಕ್ಕೆ ಹೆಚ್ಚಿಸಲಾಗಿದೆ ಇಲ್ಲೂ ಕೂಡ ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಸೂಪರ್ ಮೆಗಾ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 750 ರಿಂದ 1,000 ಹೆಚ್ಚಿಸಲಾಗಿದೆ.ಪ್ರತಿ ₹50 ಕೋಟಿ ಹೂಡಿಕೆಗೆ 35 ರಿಂದ 50ಕ್ಕೆ ಅಂದರೆ ₹50 ಕೋಟಿಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಹೆಚ್ಚುವರಿಯಾಗಿ ಸೃಷ್ಟಿಸುವ ಉದ್ಯೋಗಗಳನ್ನು ಕನ್ನಡಿಗರಿಗೆ ಸ್ಥಳೀಯರಿಗೆ ನೀಡಬೇಕು ಎಂದು ಹೇಳಿದರು.
ಕಂಪನಿಗಳಿಂದ ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆಗೆ ಪ್ರೋತ್ಸಾಹಕಗಳನ್ನು ನೀಡಬೇಕು, ರಾಜ್ಯದಲ್ಲಿ ಉದ್ಯೋಗದ ಡೇಟಾಬೇಸ್ ಅನ್ನು ರಚಿಸಿ ನಿರ್ವಹಿಸಬೇಕು ಎಂಬ ಅಂಶವನ್ನು ನೀತಿಯಲ್ಲಿ ಸೇರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.