- 7,000 ಬಸ್ ಗಳು ಬುಕ್, ಬಿಗಿ ಬಂದೋಬಸ್ತ್
NAMMUR EXPRESS NEWS
ದಾವಣಗೆರೆ: ಆಗಸ್ಟ್ 3ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಿದ್ಧರಾಮೋತ್ಸವಕ್ಕಾಗಿ ದಾವಣಗೆರೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನ ಕರೆತರಲು 7,000 ಬಸ್ ಗಳು ಬುಕ್ ಆಗಿವೆ.
ಆಗಸ್ಟ್ 3ರಂದು ದಾವಣಗೆರೆ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕಳೆದ ಎರಡು ವಾರಗಳಿಂದ ರಾತ್ರಿ ಹಗಲು ನಡೆಯುತ್ತಿರುವ ವೇದಿಕೆ, ಕಾರ್ಯಕರ್ತರಿಗೆ ಪೆಂಡಾಲ್, ಆಸನ, ಊಟದ ಸಿದ್ಧತೆ ಕೆಲಸಗಳು ಭರ್ಜರಿ ಸಾಗಿದೆ. ಈ ಕಾರ್ಯಕ್ರದಮ ಮುಖ್ಯ ವೇದಿಕೆಯಲ್ಲಿ ಆಗಸ್ಟ್ 3ರಂದು 2 ಗಂಟೆಗಳ ಕಾರ್ಯಕ್ರಮವಿರುತ್ತದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಉಪವೇದಿಕೆಗಳಲ್ಲೂ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕಾಗಿ ಭಾನುವಾರದವರೆಗೆ 325ಕ್ಕೂ ಹೆಚ್ಚು ವಾಯುವ್ಯ ರಸ್ತೆ ಸಾರಿಗೆ ಬಸ್ ಗಳು ಸೇರಿದಂತೆ ಒಟ್ಟು 7,000 ಬಸ್ ಗಳು ಬುಕ್ ಆಗಿವೆ. ದಾವಣಗೆರೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ 6 ಸಾವಿರ ಕಾರ್ಯಕರ್ತರನ್ನು ಆಹ್ವಾನಿಸಿ ಕರೆದೊಯ್ಯಲು ಸಿದ್ಧತೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 50, ಹಾವೇರಿಯಲ್ಲಿ 90, ಗದಗದಲ್ಲಿ 85 ಮತ್ತು ಧಾರವಾಡ ಜಿಲ್ಲೆಯಲ್ಲಿ 90 ಬಸ್ ಗಳು ಬುಕ್ ಆಗಿವೆ. ಇದರಿಂದ ಸಾರಿಗೆ ಸಂಸ್ಥೆಗೆ ಅಂದಾಜು 39 ಲಕ್ಷ ರೂ.ಗಳ ಆದಾಯ ಬರುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 7,000 ಬಸ್ ವ್ಯವಸ್ಥೆ ಮಾಡಲಾಗಿದೆ. ಸಿದ್ದರಾಮೋತ್ಸವಕ್ಕೆ ಆಗಮಿಸುವವರಿಗೆ ಭೋಜನ, ವಸತಿ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸುವುದು ಖಚಿತವಾದ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ.
ಸಿದ್ದರಾಮಯ್ಯ ಅವರ ಕ್ಷೇತ್ರವಾಗಿರುವ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಸೇರುವ ನಿರೀಕ್ಷೆ ಇದೆ. ಆದರೆ, ಬಸ್ ಗಳ ಅಲಭ್ಯತೆಯಿಂದಾಗಿ ಕ್ರಷರ್, ಟೆಂಪೋದಂತಹ ವಾಹನಗಳಲ್ಲಿಯೂ ಹಳ್ಳಿಗಳ ಜನರು ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ನ ಕೆಲವು ನಾಯಕರು ತಮ್ಮ ಆಪ್ತರೊಂದಿಗೆ ತಮ್ಮದೇ ಸ್ವಂತ ವಾಹನದಲ್ಲಿ ತೆರಳಲು ಸಿದ್ಧರಾಗಿದ್ದಾರೆ.
‘ಕಾರ್ಯಕ್ರಮಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು ಈಗಾಗಲೇ ಹಲವು ಮಂದಿ ಬಸ್ ಬುಕ್ಕಿಂಗ್ ಬಗ್ಗೆ ವಿಚಾರಿಸಿದ್ದಾರೆ. ಇನ್ನಷ್ಟು ಬಸ್ ಗಳು ಬುಕ್ ಆಗುವ ಸಾಧ್ಯತೆ ಇದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ದಾವಣಗೆರೆ ನಗರದ ಎಲ್ಲಾ ಲಾಡ್ಜ್, ಹೋಟೆಲ್ ಬುಕ್ ಆಗಿವೆ. ರಾಜ್ಯದ ಮೂಲೆ ಮೂಲೆಯಿಂದ ಬರುವ ನಾಯಕರು, ಭದ್ರತಾ ಕಾರ್ಯಕ್ಕೆ ಬರುವ ರಕ್ಷಣಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಉಳಿದುಕೊಳ್ಳಲು ಕಾಂಗ್ರೆಸ್ ಮುಖಂಡರೇ ಎಲ್ಲಾ ಹೋಟೆಲ್ ಲಾಡ್ಜ್ ಳನ್ನು ಬುಕ್ ಮಾಡಿದ್ದಾರೆ. ಲಕ್ಷಾಂತರ ಜನರು ಸೇರುವ ಹಿನ್ನೆಲೆಯಲ್ಲಿ ಈಗಾಗಲೇ ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.