- ಸಿಎಂ ಬದಲಾವಣೆ ಇಲ್ಲ, ಆದರೆ ಏನೋ ಆಗ್ತಿದೆ…
ಬೆಂಗಳೂರು: ರಾಜ್ಯದ ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶೀಘ್ರ ಮುಹೂರ್ತ ಫಿಕ್ಸ್ ಆಗಲಿದೆ. ಎ;ಲಾ ಹಳ್ಳಿ, ಪಟ್ಟಣಗಳಲ್ಲೂ ರಾಜಕೀಯ ಗರಿಗೆದರಿದೆ. ಆದರೆ ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿರುವುದು ರಾಜಕೀಯವಾಗಿ ಭಾರೀ ಕುತೂಹಲ ಮೂಡಿಸಿದೆ.
ಶಿರಾ, ಆರ್.ಆರ್.ನಗರ, ಪರಿಷತ್ ಚುನಾವಣೆಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪ್ರತಿ ಪಕ್ಷಗಳನ್ನು ಮಕಾಡೆ ಮಲಗಿಸಿದೆ. ಸಹಕಾರಿ ಮತ್ತು ಸಂಘ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ತನ್ನ ಗೆಲುªವಿನ ಓಟ ಮುಂದುವರಿಸಿದೆ. ಆದ್ದರಿಂದ ಹೈಕಮಾಂಡ್, ವರಿಷ್ಠರು, ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಕೈ ಹಾಕುವುದು ಡೌಟು. ಆದರೂ ಸಿಎಂ ಕಚೇರಿಯಲ್ಲಾಗುತ್ತಿರುವ ಬದಲಾವಣೆಗಳು ಸಣ್ಣ ಅನುಮಾಮನಕ್ಕೆ ಕಾರಣವಾಗಿದೆ. ಇತ್ತ ಕರಾವಳಿ ಭಾಗದಲ್ಲಿ ಮುಂದಿನ ಸಿಎಂ ಕರಾವಳಿಯವರೇ ಎಂಬ ವದಂತಿ ಹಬ್ಬಿದೆ. ಅತ್ತ ರಮೇಶ್ ಜಾರಕಿಹೊಳಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಇದೆಲ್ಲವೂ ಎನೋ ಆಗುತ್ತಿದೆ ಎಂಬ ಅನುಮಾನ ಸೃಷ್ಟಿಸಿದೆ.
ರಾಜೀನಾಮೆ ಏಕೆ?: ಯಡಿಯೂರಪ್ಪ ಆಪ್ತರಾದ ಇಬ್ಬರು ಸಲಹೆಗಾರರು ರಾಜೀನಾಮೆ ಕೊಟ್ಟ ಬೆನ್ನಲ್ಲೇ ಪರಮಾಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಎಂ.ಬಿ. ಮರಮಕಲ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಕೂಡ ರಾಜೀನಾಮೆ ನೀಡಿದ್ದರು. ಈಗ ಸಿಎಂ ಅವರ ದೂರದ ಸಂಬಂಧಿ, ಆಪರೇಷನ್ ಎಕ್ಸ್ಪರ್ಟ್ ಎನ್. ಆರ್. ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗೆ ಇಳಿಸಲಾಗುತ್ತಿದೆ, ನವೆಂಬರ್ 25 ರೊಳಗೆ ಆದೇಶ ಪ್ರತಿ ಹೊರ ಬೀಳಲಿದೆ ಎಂಬ ವದಂತಿ ಹಬ್ಬಿದೆ. ವಜಾಗೊಳಿಸುವ ಮೊದಲೇ ಅವರೇ ರಾಜೀನಾಮೆ ನೀಡುತ್ತಾರೆ ಎನ್ನಲಾಗಿದೆ.
ಯಡಿಯೂರಪ್ಪ ಬದಲಾವಣೆ ಮಾಡಿದರೆ ಪಕ್ಷದ ಬೆನ್ನೆಲುಬಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಚುನಾವಣೆಯಲ್ಲಿ ತಿರುಗಿ ಬೀಳಬಹುದು. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿ, ಪುದುಚೇರಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಮತ್ತೆ ಅಧಿಕಾರ ಕಳೆದುಕೊಂಡರೆ ಅಧಿಕಾರಕ್ಕೆ ಬರುವುದು ಸಾಧ್ಯವಾಗುವುದಿಲ್ಲ ಎಂಬ ಅಂಶವೂ ಹೈಕಮಾಂಡ್ ತಲೆಯಲ್ಲಿದೆ. ಹೀಗಾಗಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುಲಭವಿಲ್ಲ.
2010ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಕ್ಕೆ 2013ರ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಬಿಜೆಪಿ ಸೋಲಿಸಿದ್ದರು. ಮುಂಬರುವ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಒಳಗಂತೂ ನಾಯಕತ್ವ ಬದಲಾವಣೆ ಇಲ್ಲ ಎಂಬ ಚರ್ಚೆ ನಡೆಯುತ್ತಿದೆ.
ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕ, ಹಾಗೊಂದು ವೇಳೆ ಆದರೆ ಬಿಜೆಪಿ ಸೋಲು ನಿಶ್ಚಿತ ಎಂಬ ಮಾತುಗಳೂ ಕೇಳಿ ಬರುತ್ತಿವೆ.