- ವಿಧಾನ ಪರಿಷತ್ ಸ್ಥಾನಕ್ಕೆ ಯಡಿಯೂರಪ್ಪ ಮಗನ ಹೆಸರು ಅಂತಿಮ?
- ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಪಕ್ಕಾ..?
- ಮೇಲ್ಮನೆ, ರಾಜ್ಯ ಸಭಾ ಚುನಾವಣೆ::ಯಾರು ಕಣಕ್ಕೆ?
NAMMUR EXPRESS NEWS
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದೆ.
ರಾಜ್ಯ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು. ವಿಧಾನ ಪರಿಷತ್ 1 ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಹೆಸರು ಅಂತಿಮಗೊಳಿಸಲಾಗಿದೆ. ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರನ್ನು ಶಿಫಾರಸು ಮಾಡಲಾಗಿದೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ಯಡಿಯೂರಪ್ಪಗೆ ಈ ಮೊದಲೇ ಸಂದೇಶ ರವಾನೆ ಆಗಿತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಶುಕ್ರವಾರ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಭೇಟಿ ವೇಳೆ ವಿಜಯೇಂದ್ರ ಹೆಸರು ಪ್ರಸ್ತಾಪಿಸಲು ಯೋಜನೆ ರೂಪಿಸಲಾಗಿತ್ತಾ ಎಂಬ ಚರ್ಚೆ ನಡೆಯುತ್ತಿದೆ.
ಮತ್ಯಾರಿಗೆ ಸ್ಥಾನ..?
ಮಾಜಿ ಸಚಿವ ಲಕ್ಷ್ಮಣ್ ಸವದಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ನಿರ್ಮಲಾ ಕುಮಾರ್ ಸುರಾನಾ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಮಹೇಶ್ ತೆಂಗಿನಕಾಯಿ, ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೆಸರುಗಳನ್ನು ಉಳಿದ ಸ್ಥಾನಗಳಿಗೆ ಶಿಫಾರಸು ಮಾಡಲಾಗಿದೆ. ಒಂದು ಸ್ಥಾನವನ್ನು ಸಿನಿಮಾ ಅಥವಾ ಕಲೆ ಕ್ಷೇತ್ರದಿಂದ ಜನಪ್ರಿಯತೆ ಇರುವ ಒಬ್ಬ ವ್ಯಕ್ತಿ ಆಯ್ಕೆ ಮಾಡಲು ನಿರ್ಧಾರಿಸಲಾಗಿದೆ. ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರು ಕೇಳಿ ಬಂದಿದೆ.
ರಾಜ್ಯ ಸಭೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಫೈನಲ್!?
ರಾಜ್ಯಸಭೆ ಚುನಾವಣೆಯ ಒಂದು ಸೀಟ್ಗೆ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಳಿಸಲಾಗಿದೆ.
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು.
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಒಂದು ಸ್ಥಾನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಂಡಿದೆ.
ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ಜೈರಾಂ ರಮೇಶ್ ಅವರಿಂದ ತೆರವಾಗಲಿರುವ ಮೂರು ಸ್ಥಾನ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಲಿರುವ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಈ ಪೈಕಿ ನಿರ್ಮಲಾ ಸೀತಾರಾಮನ್ ಮತ್ತೆ ಒಂದು ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗಿದೆ.
ರಾಜ್ಯ ಸಭೆಗೆ ಲಹರಿ ವೇಲು..?
ರಾಜ್ಯಸಭಾ ಮೂರನೇ ಸ್ಥಾನಕ್ಕೆ ಲಹರಿ ವೇಲು, ಪ್ರಕಾಶ್ ಶೆಟ್ಟಿ ಹೆಸರು ಶಿಫಾರಸ್ಸು ಆಗಿದ್ದು, ಮೂರನೇ ಸ್ಥಾನಕ್ಕೆ ಮತಗಳ ಕೊರತೆ ಎದುರಾಗಲಿದೆ. ಹೆಚ್ಚುವರಿ ಮತಗಳನ್ನ ಅನ್ಯಪಕ್ಷಗಳಿಂದ ಪಡೆಯುವಂತೆ ಸೂಚಿಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹೆಸರು ರಾಜ್ಯಸಭೆ ಮತ್ತು ಪರಿಷತ್ ಎರಡಕ್ಕೂ ಪ್ರಸ್ತಾಪ ಆಗಿರುವ ಬಗ್ಗೆ ವರದಿಯಾಗಿದ್ದು, ಇನ್ನೊಂದು ಸೀಟ್ಗೆ ಕೆ.ಸಿ.ರಾಮಮೂರ್ತಿ ಸೇರಿದಂತೆ 5 ಹೆಸರು ಶಿಫಾರಸ್ಸು ಆಗಿದೆ.