50 ವರ್ಷಗಳ ಬಳಿಕ ಹಳೆ ಡ್ಯಾಮ್ ಗೋಚರ!
– ಸುಮಾರು 4000 ಅಡಿ ಉದ್ದದ ಹಿರೇಭಾಸ್ಕರ ಡ್ಯಾಂ
– ಶರಾವತಿ ಹಿನ್ನೀರಿನಲ್ಲಿ ಡ್ಯಾಮ್ ಪ್ರತ್ಯಕ್ಷ
– ಸುಣ್ಣ, ಬೆಲ್ಲದಿಂದ ಕಾಮಗಾರಿ: ಕರ್ನಾಟಕಕ್ಕೆ ಮೊದಲು ವಿದ್ಯುತ್ ಕೊಟ್ಟಿದ್ದು ಇದೆ ಆಣೆಕಟ್ಟು!
ವಿಶೇಷ ವರದಿ: ಪ್ರಾಪ್ತಿ
NAMMUR EXPRESS NEWS
ಸಾಗರ: ಶರಾವತಿ ನದಿಯ ಅತ್ಯಂತ ಹಳೆಯ ಅಣೆಕಟ್ಟೆ ಸುಮಾರು 4000 ಅಡಿ ಉದ್ದದ ಹಿರೇಭಾಸ್ಕರ ಡ್ಯಾಂ ಅಥವಾ ಮಡೆನೂರು ಡ್ಯಾಮ್ ಇದೀಗ ಗೋಚರವಾಗಿರುವುದು ಪ್ರವಾಸಿಗರನ್ನು ಸೆಳೆಯುತ್ತಿದೆ. ಹಿರೇಭಾಸ್ಕರ ಮಡೆನೂರು ಡ್ಯಾಮ್ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಡ್ಯಾಮ್. 1937-38ರಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ನೀರು ಕೊಡಲು ಶುರುವಾದ ಡ್ಯಾಮ್ ಇಡೀ ರಾಜ್ಯದ ಬೆಳಕಿನ ಕೇಂದ್ರವಾಗಿತ್ತು. ಇದೀಗ ಲಿಂಗನಮಕ್ಕಿ ಡ್ಯಾಮ್ ಅಲ್ಲಿ ನೀರು ಕಡಿಮೆಯಾದ ಕಾರಣ 55 ವರ್ಷಗಳ ಬಳಿಕ ಗೋಚರವಾಗಿದೆ. ಕಳೆದ ವರ್ಷವೂ ಕಂಡಿತ್ತು.
ರಾಜ್ಯದ ಮೊದಲ ವಿದ್ಯುತ್ ಡ್ಯಾಮ್ ಇದು!
ಜಲವಿದ್ಯುತ್ ಯೋಜನೆಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆಗೆ ಕಾರಣವಾದ ಮೊಟ್ಟಮೊದಲ ಅಣೆಕಟ್ಟೆಂದರೆ ಅದು ಹಿರೆಭಾಸ್ಕರ ಡ್ಯಾಂ. ಸಾಗರ ತಾಲೂಕಿನ ಸಿಗಂದೂರು ಲಾಂಚ್ ಮಾರ್ಗದ ಬಳಿ ಇರುವ ಮಲೆನಾಡಿನ ಮೊಟ್ಟಮೊದಲ ಜಲವಿದ್ಯುತ್ ಯೋಜನೆ ಇದಾಗಿದ್ದು,ಇಂದು ಕೆವಲ ನೆನಪಷ್ಟೆ. ಲಿಂಗನಮಕ್ಕಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹಿರೇಭಾಸ್ಕರ ಡ್ಯಾಂ ಐವತ್ತೈದು ವರ್ಷಗಳ ನಂತರ ಮತ್ತೊಮ್ಮೆ ಮೈದಡವಿ ನಿಂತಿದೆ. ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾದಾಗ ಹಿರೇಬಾಸ್ಕರ ಡ್ಯಾಂ ನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ .ಅಂದು ಅಣೆಕಟ್ಟು ಹೇಗಿತ್ತೋ ನೀರಿನಲ್ಲಿ ಮುಳುಗಿ 55 ವರ್ಷಗಳಾದ ನಂತರವೂ ಅದೇ ಗಟ್ಟಿತನವನ್ನು ಉಳಿಸಿಕೊಂಡಿದೆ.
ಸುಣ್ಣ, ಬೆಲ್ಲದಲ್ಲಿ ಮಾಡಿದ್ದ ಆಣೆಕಟ್ಟು!
ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ನಿರ್ಮಾಣವಾದ ಅಣೆಕಟ್ಟು ನಂತರ ಶರಾವತಿ ನದಿಯಲ್ಲಿ ಮುಳುಗಡೆಯಾದ ಕಾರಣ ಸುಮಾರು 40 ಅಡಿ ಮುಳುಗಿದರೂ ಇಂದಿಗೂ ಸುಸ್ಥಿತಿಯಲ್ಲಿದೆ. 1949ರಲ್ಲಿ ಈ ಅಣೆಕಟ್ಟು ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಲ್ಲಿ ನಿರ್ಮಾಣ ಆಗಿತ್ತು. ಹಿರೇಭಾಸ್ಕರ ಡ್ಯಾಂ ಇಂದಿಗೂ ನೀರಿನಲ್ಲಿ ಗಟ್ಟಿಮುಟ್ಟಾಗಿದ್ದು, ಬೆಲ್ಲ ಸುಣ್ಣದ ಮಿಶ್ರಣದ ಸುರ್ಕಿಯಿಂದ ನಿರ್ಮಾಣವಾಯಿತು. ಆದ್ದರಿಂದ ದಶಕಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಜೀವಂತಿಕೆ ಉಳಿಸಿಕೊಳ್ಳಲು ಸಾದ್ಯವಾಗಿದೆ.ಈ ಸುರ್ಕಿಯ ಭಾಗವೇ ಸುಮಾರು 1150 ಅಡಿ ಉದ್ದವಿದೆ. ಸಿಗಂದೂರು ರಸ್ತೆ ಲಾಂಚ್ ಕಾಮಗಾರಿ ಸೈಟ್ ಹತ್ತಿರ ಶರಾವತಿ ಅಭಯಾರಣ್ಯ ಗೇಟ್ ಅಲ್ಲಿಂದ ಕಾಡಿನ ದಾರಿ 4 ಕಿ.ಮೀ ದೂರದಲ್ಲಿದೆ.
1964ರಲ್ಲಿ ಮುಳುಗಿ ಹೋಯ್ತು!
ಸಮುದ್ರ ಮಟ್ಟದಿಂದ ಸುಮಾರು 1820 ಅಡಿ ಇರುವ ಈ ಡ್ಯಾಮ್ 1964ರಲ್ಲಿ 1774 ಅಡಿ ಇರುವ ಲಿಂಗನಮಕ್ಕಿ ಡ್ಯಾಮ್ ನಿರ್ಮಾಣದ ಬಳಿಕ ಮುಳುಗಿತ್ತು. ಇದೀಗ ಬೇಸಿಗೆ ಹೆಚ್ಚಾಗಿ ಲಿಂಗನಮಕ್ಕಿಯಲ್ಲಿ ನೀರಿಲ್ಲದ ಕಾರಣ ಗೋಚರವಾಗುತ್ತಿದೆ. ಹಿಂದಿನ ಕಾಲದ ಕಾಮಗಾರಿ ಈಗಲೂ ಸುಂದರವಾಗಿದೆ.