ಶಿವಮೊಗ್ಗದಲ್ಲಿ ಅರಣ್ಯ ಸಚಿವರಿಗೆ ರೈತರ ಪತ್ರ!
– ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ
– ರೈತರನ್ನು ಒಕ್ಕಲೆಬ್ಬಿಸುವ ಕಾರಣಕ್ಕೆ ದೂರು ಪತ್ರ ಸಲ್ಲಿಕೆ
– ತಕ್ಷಣವೇ ಕಡಿವಾಣ ಹಾಕಲು ರೈತ ಸಂಘ ಪತ್ರ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆಯವರಿಗೆ ಮನವಿ ಪತ್ರ ಅರ್ಪಿಸಿತು.
ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯ ಹಂಚಿನ ಸಿದ್ದಾಪುರ, ಅಗರದಹಳ್ಳಿ, ತಡಸ, ಮಲ್ಲಿಗೇನಹಳ್ಳಿ, ಗುಡುಮುಗಟ್ಟೆ, ಇಟ್ಟಿಗೆಹಳ್ಳಿ, ದಿಗ್ಗೇನಹಳ್ಳಿ, ಆದ್ರಿಹಳ್ಳಿ, ಆನವೇರಿ ಗ್ರಾಮಗಳ ರೈತರಿಗೆ ಅರಣ್ಯ ಇಲಾಖೆ ವಿನಾ ಕಾರಣ ತೊಂದರೆ ನೀಡುತ್ತಿದೆ.
ನಿಯಮಾನುಸಾರ ಜಮೀನಿಗೆ ಸಾಗುವಳಿ ಚೀಟಿ ಪಡೆದು, ಖಾತೆ, ಪಹಣಿ ದಾಖಲೆ ಹೊಂದಿರುವ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸಂಘಟನೆ ಮನವಿ ಪತ್ರದಲ್ಲಿ ದೂರಿದೆ.
ಜೊತೆಗೆ ರೈತರು ಭೂ ಕಬಳಿಕೆ ಮಾಡಿದ್ದಾರೆ ಎಂದು ಬೆಂಗಳೂರಿನ ಭೂ ಕಬಳಿಕೆ ನ್ಯಾಯಾಲಯ ಹಾಗೂ ಸ್ಥಳೀಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆಯು ಕೇಸ್ ದಾಖಲಿಸಿ ಕಿರುಕುಳ ನೀಡುತ್ತಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಶಿವಮೊಗ್ಗ ತಾಲೂಕಿನ ಪುರದಾಳು, ತಮ್ಮಡಿಹಳ್ಳಿ, ಬೆಳ್ಳೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ರೈತರ ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ರೈತ ಸಂಘಟನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಮುಖಂಡರಾದ ಟಿ.ಎಂ.ಚಂದ್ರಪ್ಪ, ಇ ಬಿ ಜಗದೀಶ್, ಎಂ ಮಹದೇವಪ್ಪ, ಸಿ ಚಂದ್ರಪ್ಪ, ಜ್ಞಾನೇಶ್, ಹನುಮಂತಪ್ಪ ಮೊದಲಾದವರಿದ್ದರು