ಹರ್ಷ ಕೊಲೆ ಪ್ರಕರಣ ಎನ್ಐಎಗೆ ಹಸ್ತಾಂತರ ಸರಿ!
– ಶಿವಮೊಗ್ಗದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಹೈಕೋರ್ಟ್ ತೀರ್ಪು
– ಸಾಗರ: ರೈಲ್ವೆ ಹಳಿಯಲ್ಲಿ ಯುವಕನ ಕೊಲೆಯೋ? ಆತ್ಮಹತ್ಯೆ?
– ತೀರ್ಥಹಳ್ಳಿ: ಭಾರೀ ಮಳೆ: ಗುಡುಗು ಸಿಡಿಲು ಅನಾಹುತ
– ಶಿಕಾರಿಪುರ: ಸಂತೆಗೆ 37 ಜನರಿಗೆ ಕಚ್ಚಿದ ಹುಚ್ಚು ನಾಯಿ!
– ಹೊಸನಗರ: ಅಕ್ರಮವಾಗಿ ಸಾಗಿಸುತಿದ್ದ 20 ಗೋವುಗಳ ರಕ್ಷಣೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಫೆಬ್ರವರಿ 20, 2022 ರಂದು ನಡೆದಿದ್ದ ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಈ ಸಂಬಂಧ ಕೊಲೆ ಪ್ರಕರಣದ ಆರೋಪಿಯೊಬ್ಬರು ಎನ್ಐಎಗೆ ಪ್ರಕರಣವನ್ನ ವರ್ಗಾಯಿಸಿದ್ದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಪ್ರಕರಣವನ್ನು ಎನ್ಐಎಗೆ ವಹಿಸಲು ಅನುಮತಿ ಪಡೆದಿಲ್ಲ ಎಂದು ವಾದಿಸಿದ್ದರು. ಈ ಸಂಬಂಧ ಅರ್ಜಿದಾರರ ಪರ ವಕೀಲರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ನಂತರ ಪ್ರಕರಣ ಎನ್ಐಎಗೆ ವಹಿಸಿದಾಗ ಯುಎಪಿಎ ಕಲಂಗಳನ್ನು ಸೇರಿಸಲಾಗಿದೆ. ಆದರೆ, ಅದಕ್ಕೆ ಈ ಸಂಬಂಧ ಕೋರ್ಟ್ ಅನುಮತಿ ಪಡೆದಿರಲಿಲ್ಲ. ಮೇಲಾಗಿ ಯುಎಪಿಎ ರೀತಿಯ ಗಂಭೀರ ಕಾಯಿದೆ ಹೇರಲು ಯಾವುದೇ ಆಧಾರವಿರಲಿಲ್ಲ ಎಂದು ವಾದಿಸಿದ್ದರು.
ಇನ್ನೂ ಈ ಕುರಿತಾಗಿ ಕೇಂದ್ರ ಸರ್ಕಾರದ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ವಾದವೇನಿತ್ತು..?!
ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಮೃತನು ಬಜರಂಗದಳ ಹಾಗೂ ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತನಾಗಿದ್ದನು. ಎಲ್ಲಾ ಸಾಕ್ಷಿಗಳ ಆಧರಿಸಿಯೇ ಪ್ರಕರಣದ ತನಿಖೆಯನ್ನು ಎನ್ಐಎ ವಹಿಸಲಾಗಿದೆ. ಅದರಲ್ಲಿ ಯಾವುದೇ ಲೋಪವಿಲ್ಲಎಂದು ವಾದಿಸಿದ್ದರು.
ಎರಡು ಕಡೆಯ ವಾದವನ್ನ ಆಲಿಸಿದ ಹೈಕೋರ್ಟ್ ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರವಷ್ಟೇ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲಾಗಿದೆ. ಏನೂ ಆಧಾರವಿಲ್ಲದೆ ತನಿಖೆ ವರ್ಗಾವಣೆ ಮಾಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು.
ಸಾಗರ: ರೈಲ್ವೆ ಹಳಿಯಲ್ಲಿ ಯುವಕನ ಕೊಲೆಯೋ? ಆತ್ಮಹತ್ಯೆ?
ರೈಲ್ವೆ ಹಳಿಯ ಮೇಲೆ ಅನುಮಾನಸ್ಪದ ರೀತಿಯಲ್ಲಿ ಪುರುಷನೊಬ್ಬನ ಶವ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ನಡೆದಿದೆ.
ಅಂದಾಸುರ ರೈಲ್ವೆ ಗೇಟ್ ಸಮೀಪದಲ್ಲಿರುವ ದೇವಸ್ಥಾನವೊಂದರ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎನ್ನಲಾಗುತಿದೆ.
ರೈಲು ಹಳಿಯ ಮೇಲೆ ಮೃತದೇಹ ಪತ್ತೆಯಾಗಿದ್ದು, ಮುಖದ ಭಾಗದಲ್ಲಿ ಗಾಯವಾಗಿದೆ. ಮೃತ ವ್ಯಕ್ತಿಗೆ ಸಂಬಂಧಿಸಿದ ಬೈಕ್ ಹಾಗೂ ವಸ್ತುಗಳು ರೈಲ್ವೆ ಹಳಿಯ ಪಕ್ಕದಲ್ಲಿರಿಸಲಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಇನ್ನಷ್ಟೇ ಬರಬೇಕಾಗಿದ್ದು ಪೊಲೀಸ್ ತನಿಖೆಯಿಂದ ಈ ಪ್ರಕರಣದ ಸತ್ಯಾಂಶ ಹೊರಬರಬೇಕಾಗಿದೆ.
ರೈಲು ಗುದ್ದಿ ಮೃತಪಟ್ಟಿದ್ದಲ್ಲಿ ಮೃತದೇಹ ಚೆಲ್ಲಾಪಿಲ್ಲಿಯಾಗಬೇಕಿದ್ದು, ಹಾಗಾಗಿ ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಹಾಕಿದ್ದಾರೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತಿದ್ದಾರೆ.
ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಭಾರೀ ಅನಾಹುತ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಸಂಜೆ ಬಳಿಕ ಭಾರೀ ಮಳೆ ಆಗುತ್ತಿದ್ದು ಗುಡುಗು ಸಿಡಿಲು ಬರುತ್ತಿದೆ. ಹಲವೆಡೆ ವಿದ್ಯುತ್ ಕಡಿತವಾಗಿದೆ. ಭಾರೀ ಮಳೆಯಿಂದ ಜನತೆಗೆ ಭಾರೀ ತೊಂದರೆ ಆಗಿದೆ.
ಶಿಕಾರಿಪುರ: ಸಂತೆಗೆ 37 ಜನರಿಗೆ ಕಚ್ಚಿದ ಹುಚ್ಚು ನಾಯಿ!
ಶಿಕಾರಿಪುರ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಪಟ್ಟಣದ ಸಂತೆ ಸಂದರ್ಭದಲ್ಲಿ ಹುಚ್ಚುನಾಯಿಯೊಂದು ಸುಮಾರು 37 ಮಂದಿಗೆ ಕಚ್ಚಿರುವ ಬಗ್ಗೆ ವರದಿಯಾಗಿದೆ.
ಹುಚ್ಚು ನಾಯಿ ಕಡಿತದಿಂದ ಗಾಯಗೊಂಡವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. ಇನ್ನೊಂದಡೆ ಹುಚ್ಚು ನಾಯಿಯನ್ನು ಸಾರ್ವಜನಿಕರೇ ಹೊಡೆದು ಕೊಂದು ಹಾಕಿದ್ದಾರೆ. ಒಂದೇ ದಿನ ನಾಯಿ ಕಡಿತದಿಂದಾಗಿ ಸರ್ಕಾರಿ ಆಸ್ಪತ್ರೆಗೆ ಅತಿಹೆಚ್ಚು ಮಂದಿ ಆಗಮಿಸಿದ್ದಾರೆ. ಇದರಿಂದಾಗಿ ಪ್ರಕರಣ ಅಧಿಕಾರಿಗಳ ಗಮನ ಸೆಳೆದಿದೆ.
ಹೊಸನಗರ: ಅಕ್ರಮವಾಗಿ ಸಾಗಿಸುತಿದ್ದ 20 ಗೋವುಗಳ ರಕ್ಷಣೆ
ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಗೋವುಗಳನ್ನ ಸಾಗಿಸಲು ಯತ್ನಿಸುತ್ತಿದ್ದ ವಾಹನವನ್ನ ತಡೆದು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಕ್ಕೂ ಹೆಚ್ಚು ಗೋವುಗಳನ್ನು ಹೊಸನಗರ ತಾಲ್ಲೂಕಿನ ನಗರದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅಡ್ಡಗಟ್ಟಿ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಗೋವುಗಳನ್ನು ಅಕ್ರಮವಾಗಿ ಕ್ಯಾಂಟರ್ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿರುವ ಖಚಿತ ಮಾಹಿತಿಯನ್ನರಿತ ಸಂಘಟನೆಯ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿ ಪಿಎಸ್ಐ ಶಿವಾನಂದ್ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.