ಮಲೆನಾಡಿನಲ್ಲಿ ಅಡಿಕೆ ಇಳುವರಿ ಭಾರಿ ಕುಸಿತ
– ಈ ಬಾರಿ ರೈತರ ಆದಾಯಕ್ಕೆ ಕತ್ತರಿ!
– ಈ ವರ್ಷ ತೂಕ ಕಳೆದುಕೊಂಡ ಸಂಸ್ಕರಿತ ಅಡಕೆ
NAMMUR EXPRESS NEWS
ಶಿವಮೊಗ್ಗ: ಜೀವನಾಧಾರ ಬೆಳೆ ಅಡಿಕೆ ಇಳುವರಿ ಈ ವರ್ಷ ನಿರೀಕ್ಷೆಗೂ ಮೀರಿ ಇಳಿಕೆ ಕಂಡಿದೆ. ಕೊಳೆ,ಬೂದುಗೊಳೆ, ಎಲೆಚುಕ್ಕಿ, ಹಸಿರುಕಾಯಿ ಉದುರುವ ರೋಗಕ್ಕೆ ಸಿಕ್ಕ ಅಡಿಕೆ ರೈತರ ಆದಾಯಕ್ಕೆ ಕತ್ತರಿ ಹಾಕಿದೆ. ಅಡಿಕೆ ಬೆಳೆಯ ಇಳುವರಿ ಕುಸಿತ ಮಲೆನಾಡು ಭಾಗದ ಆರ್ಥಿಕ ಚಟುವಟಿಕೆಗೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಮೊದಲು ಅಡಿಕೆ ಗೊನೆ ಕೊಯ್ಲು ಮುಗಿದು ಎರಡನೆ ಹಂತದ ಕೊಯ್ಲು ಮುಕ್ತಾಯದ ಘಟ್ಟ ತಲುಪಿದೆ. ರೈತರು ಅಡಿಕೆ ಫಸಲಿನ ಲೆಕ್ಕಾಚಾರ ಹಾಕುತ್ತಿದ್ದು , ಬೆಳೆ ಕೈ ಕೊಟ್ಟಿರುವುದು ಖಚಿತವಾಗಿದೆ. ಮರದಲ್ಲಿ ಗೊನೆ ಕಂಡರೂ ಫಸಲು ನಿರೀಕ್ಷೆಯಂತೆ ಇಲ್ಲದಾಗಿದೆ. ಅಚ್ಚರಿ ಎಂದರೆ ಸಂಸ್ಕರಣೆ ಅಡಿಕೆ ಭಾರೀ ಪ್ರಮಾಣದಲ್ಲಿ ತೂಕ ಕಳೆದುಕೊಂಡಿರುವುದು ರೈತರನ್ನು ಕಂಗಲಾಗಿಸಿದೆ.
4 ರಿಂದ 5 ಬಾರಿ ಔಷಧ ಸಿಂಪಡಣೆ ಮಾಡಿದರೂ ಅಡಿಕೆಗೆ ತಗುಲಿದ ರೋಗಗಳು ನಿಯಂತ್ರಣಕ್ಕೆ ಬಂದಿಲ್ಲ. ಇದು ಫಸಲು ನಷ್ಟಕ್ಕೆ ಕಾರಣ ಇರಬಹುದು ಎಂಬ ಅಂದಾಜು ರೈತರದ್ದಾಗಿದೆ. ಬಹುತೇಕ ತೋಟದಲ್ಲಿ 3 ಕೊಯ್ಲಿಗೆ ಅಡಿಕೆ ಗೊನೆಗಳೇ ಇಲ್ಲದಾಗಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಫಸಲು ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಕಾರಣವಾಗಿರುವ ಅಂಶಗಳತ್ತ ರೈತರು ಗಮನಹರಿಸಿದರೂ ಸ್ಪಷ್ಟ ಉತ್ತರ ಸಿಗದಂತಾಗಿದೆ. ಹೆಚ್ಚು ಮಳೆ ಸುರಿದ ವರ್ಷಗಳಲ್ಲೂ ಅಡಿಕೆ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಆಗಿರಲಿಲ್ಲ. ಅತೀ ಹೆಚ್ಚು ಮಳೆ ಸುರಿಯುವ ಆಗುಂಬೆ, ಕಸಬಾ, ಮುತ್ತೂರು ಹೋಬಳಿ ವ್ಯಾಪ್ತಿ ಪ್ರದೇಶದಲ್ಲಿ ಸರಾಸರಿ ಪ್ರಮಾಣದಲ್ಲಿ ಅಡಿಕೆ ಫಸಲು ದೊರೆಯುತ್ತಿತ್ತು. ಈ ವರ್ಷ ಅತೀ ಹೆಚ್ಚು ಮಳೆ ಸುರಿದ ಪ್ರದೇಶಗಳಲ್ಲಿ ಅಡಿಕೆ ಫಸಲು ಸಾಮಾನ್ಯ ಪ್ರಮಾಣದಲ್ಲಿದೆ. ಆದರೆ, ಕಡಿಮೆ ಮಳೆ ಸುರಿಯುವ ಮಂಡಗದ್ದೆ, ಅಗ್ರಹಾರ ಹೋಬಳಿ ವ್ಯಾಪ್ತಿಯಲ್ಲಿ ಅಡಿಕೆ ಫಸಲಿನ ಇಳುವರಿ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿದೆ.
ಆದಾಯಕ್ಕೆ ಪೆಟ್ಟು ಬಿದ್ದಿರುವ ಜತೆಗೆ ತೋಟದ ಭವಿಷ್ಯ ಏನಾಗಲಿದೆ ಎಂಬ ಆತಂಕ ರೈತರನ್ನು ಬಿಡದೆ ಕಾಡುತ್ತಿದೆ. ಇಂತಹ ಬಿಕ್ಕಟ್ಟಿನ ಸನ್ನಿವೇಶವನ್ನು ಬಂಡವಾಳ ಮಾಡಿಕೊಳ್ಳುವ ಪ್ರಯತ್ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ನಡೆದಿದೆ. ಕೆಲವು ಖಾಸಗಿ ಕಂಪನಿಗಳ ಮಾರಾಟ ಪ್ರತಿನಿಧಿಗಳು ಹಳ್ಳಿಗಳತ್ತ ಹೆಜ್ಜೆ ಇಟ್ಟಿದ್ದಾರೆ. ಬೆಳೆ ವೃದ್ಧಿಸುವ, ಇಳುವರಿ ಹೆಚ್ಚಿಸುವ, ರೋಗ ಮುಕ್ತಗೊಳಿಸುವ ಭರವಸೆ ನೀಡಿ ದುಬಾರಿ ದರದ ಔಷಧ, ಗೊಬ್ಬರ ಮಾರಾಟ ಮಾಡುವ ವ್ಯಾಪಾರಿ ಪ್ರಯತ್ನ ನಡೆದಿದೆ. ಈಗಾಗಲೇ ಇಳುವರಿ ಇಳಿಕೆಯಿಂದ ಸಂಕಷ್ಟಕ್ಕೀಡಾಗಿರುವ ರೈತರು ಮಾರುಕಟ್ಟೆ ಲಾಬಿಗೆ ಸುಲಭವಾಗಿ ಸಿಕ್ಕಿಕೊಳ್ಳುತ್ತಿದ್ದಾರೆ. ಅಡಿಕೆ ಇಳುವರಿ ಇಳಿಕೆ ರೈತರನ್ನು ಇನ್ನೊಂದು ರೀತಿಯಲ್ಲಿ ಇಕ್ಕಟ್ಟಿಗೆ ಸಿಕ್ಕಿಸಿದೆ.