ಚುನಾವಣೆಗೆ ಸೀಮಿತವಾಗ್ತಿದೆ ಜನರ ಬಗೆಗಿನ ಕಾಳಜಿ!
– ನೂರೆಂಟು ಸಮಸ್ಯೆ: ಮೈಮರೆತ ಅಧಿಕಾರಿ ವರ್ಗ
– ಜನರ ಬದುಕು ದಿನೇ ದಿನೇ ಭಾರ!
ವಿಶೇಷ ವರದಿ: ಅನನ್ಯ
NAMMUR EXPRESS NEWS
ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ರಾಜಕಾರಣ ಬಹಳ ಜೋರಾಗಿ ಸದ್ದು ಮಾಡುತ್ತದೆ. ಪ್ರತಿ ನಾಯಕರು ಸಾವಿರಾರು ಆಶ್ವಾಸನೆ ಕೊಡುತ್ತಾರೆ. ನಂತರ ಮೌನವಾಗುತ್ತದೆ. ನಾವು ಆಯ್ಕೆ ಮಾಡುವ ಜನನಾಯಕ ಚುನಾವಣೆ ನಂತರದಲ್ಲಿ ನಾಯಕನಾಗುತ್ತಾನೆ. ಇದು ಹೊಸತೇನಲ್ಲ…! ಹೌದು. ಈ ಬಾರಿ ಕೂಡ ರಾಜ್ಯದ ಹಲವು ಹಳ್ಳಿಗಳಲ್ಲಿ ಜನ ಮೂಲ ಭೂತ ಸೌಕರ್ಯಕ್ಕಾಗಿ ಅಗ್ರಹಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ತಮ್ಮ ಹಕ್ಕನ್ನು ತ್ಯಜಿಸಿ ನ್ಯಾಯ ಕೇಳಿದ್ದಾರೆ. ಆದರೆ ಈ ಬಗ್ಗೆ ಆಡಳಿತ, ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ವಹಿಸಿದಂತೆ ಕಾಣುತ್ತಿಲ್ಲ.
ಚುನಾವಣೆ ನಂತರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಒಂದಷ್ಟು ಕಾಮಗಾರಿಗಳು ನಡೆಯುತ್ತವೆ , ಆದರೆ ಅದು ಹೇಗಿರುತ್ತದೆ ಎಂದರೆ ನಮ್ಮಲ್ಲಿ ಒಂದು ಮಾತಿದೆ ‘ ಬಡವ ಬಡವನೇ, ಬಲ್ಲಿದ ಬಲ್ಲಿದನೇ ‘. ಆ ಅಭಿವೃದ್ಧಿಯ ಫಲ ದೊರೆತವನಿಗೆ ದೊರೆಯುತ್ತದೆಯೇ ವಿನಃ ಏನು ಇಲ್ಲದವನಿಗಲ್ಲ. ಬಡವ ಬಡವನಾಗಿಯೇ ಉಳಿಯುವತ್ತ ವ್ಯವಸ್ಥೆ ಕೈ ಜಾರುತ್ತಿದೆ.
ಕನಸಾಗಿಯೇ ಉಳಿದ ಗ್ರಾಮ ಅಭಿವೃದ್ಧಿ?
ಗಾಂಧೀಜಿ ಅವರು ಅವರ ಕಾಲದಲ್ಲಿಯೇ ಹೇಳಿದ್ದರು ‘ ಗ್ರಾಮಗಳ ಉದ್ಧಾರವಾಗದೆ ದೇಶದ ಅಭಿವೃದ್ಧಿ ಅಸಾಧ್ಯ.’ ಎಂದು. ಇಂದು ನಾವು ಅಂತರ್ಜಾಲ ಇಡೀ ಪ್ರಪಂಚವನ್ನೇ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದೆ, ಆದರೆ ಇಂದು ಎಷ್ಟೋ ಹಳ್ಳಿಗಳಲ್ಲಿ ನೆಟವರ್ಕ್ ಸಮಸ್ಯೆ ಇದೆ, ರಸ್ತೆ, ಮನೆ, ಕುಡಿಯುವ ನೀರಿನ ಸಮಸ್ಯೆ ಇದೆ. ಸರ್ಕಾರಿ ಕಚೇರಿಗಳು ಲಂಚದ ಕೇಂದ್ರಗಳಾಗುತ್ತಿವೆ. ಆದರೆ ಸಂಬಂಧಪಟ್ಟವರು ಮೌನಕ್ಕೆ ಜಾರಿದ್ದಾರೆ.
ಜನರ ಜೀವಕ್ಕೆ ಖಾತ್ರಿ ಇಲ್ಲ!
ಸರ್ಕಾರ ಉಚಿತ ಆಂಬುಲೆನ್ಸ್ ಸೇವೆ ನೀಡಿದೆ. ಆದರೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಮನೆ ತಲುಪಲು ಅನುಕೂಲವಾಗುವಂತ ರಸ್ತೆ ವ್ಯವಸ್ಥೆ ಇಲ್ಲ, ಇದರಿಂದ ಎಷ್ಟೋ ಜೀವಗಳು ಅಸುನೀಗಿವೆ. ಸ್ವಚ್ಛ ಭಾರತ ಅಭಿಯಾನದ ಹೆಸರಲ್ಲಿಯೂ ಸಾಕಷ್ಟು ಹಣ ಇಂದು ವ್ಯಯವಾಗುತ್ತಿದೆ. ಆದರೆ ಸ್ವಚ್ಛತೆ ಇಲ್ಲ,
ಅಧಿಕಾರಿಗಳ ಕಚೇರಿಗಳು ಅರಮನೆಯಂತಾಗುತ್ತಿವೆ…!
ಅಧಿಕಾರಿಗಳ ಕಚೇರಿಗಳು ಅರಮನೆಯ ರೀತಿಯಲ್ಲಿ ತಯಾರಾಗುತ್ತಿವೆ. ರಾಜ್ಯದಲ್ಲಿ ಒಬ್ಬ ರೈತ ಸಾಲ ಮಾಡಿ ಮನೆ ಕಟ್ಟಿ ಸಾಲ ತೀರಿಸುವಲ್ಲಿಯೇ ತನ್ನ ಇಡೀ ಜೀವನವನ್ನು ಕಳೆಯುತ್ತಾನೆ. ‘ಕಡಲುಗಳ್ಳರಿಂದ ಸ್ವಾತಂತ್ಯ ಸಿಕ್ಕಿತು, ಒಡಲುಗಳ್ಳರಿಂದಲ್ಲ’ ಎಂಬಂತೆ ನಮ್ಮ ರೈತರಿಗಿನ್ನು ಸ್ವಾತಂತ್ರ್ಯ ಸಿಕ್ಕಿಲ್ಲ.
ಎಲ್ಲಾ ಕಡೆ ಪ್ರಭಾವಿಗಳ ಆಟ!
ಯಾವುದೇ ಕ್ಷೇತ್ರದಲ್ಲಿ ಕೂಡ ಈಗ ಪ್ರಭಾವಿಗಳು, ರಾಜಕಾರಣಿಗಳು ತಮ್ಮ ಆಟ ನಡೆಸುತ್ತಿದ್ದಾರೆ. ಇದರಿಂದ ಬಡವರು, ದುರ್ಬಲರು ತೊಂದರೆಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಧಿಕಾರಿಗಳು ಉಳ್ಳವರ ಕೈಗೊಂಬೆಗಳಾಗುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಸಮಾಜದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚು ಮಾಡುತ್ತಿವೆ. ಇದೆಲ್ಲ ಸರಿ ಪಡಿಸುವರ್ಯಾರು?