ಹೈಟೆಕ್ ಯುಗದಲ್ಲೂ ಹಳ್ಳಿಗಳ ಅಭಿವೃದ್ಧಿ ಕನಸು!
– ಗ್ರಾಮೀಣ ಅಭಿವೃದ್ಧಿ ಯಾವಾಗ..?, ಸಣ್ಣ ಹಂತದ ಪಟ್ಟಣಕ್ಕೆ ಬೇಕು ಅನುದಾನ
– ನಗರಾಭಿವೃದ್ಧಿಗೆ ನೀಡುವ ಗಮನ ಗ್ರಾಮಾಭಿವೃದ್ಧಿಗೆಕಿಲ್ಲ?
– ಜನರಿಗೆ ಬೇಕಾದ ಮೂಲ ಸೌಲಭ್ಯವೇ ಇಲ್ಲ ಸ್ವಾಮಿ!
ವಿಶೇಷ ವರದಿ : ಅನನ್ಯ
NAMMUR EXPRESS NEWS
ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದಿನೇ ದಿನೇ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. ಇತರೆ ರಾಷ್ಟ್ರಗಳೊಂದಿಗೆ ಅಂತಾರಾಷ್ಟ್ರೀಯವಾಗಿ ಸ್ಪರ್ಧಿಸುತ್ತಿದೆ. ವೈಜ್ಞಾನಿಕವಾಗಿ, ಸಾಮಾಜಿಕವಾಗಿ , ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುತ್ತಿದೆ. ಇಂದು ನಾವು ಚಂದ್ರಯಾನ ಕೈಗೊಂಡು ಯಶಸ್ವಿಯಾಗಿದ್ದೇವೆ, ಸಿಟಿಗಳು ಸ್ಮಾರ್ಟ್ ಸಿಟಿಗಳಾಗಿ ಬದಲಾಗಿವೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದೇವೆ. ಆದರೆ ಒಂದು ಮರ ಸಮೃದ್ಧಿಯಾಗಿ ಬೆಳೆಯಲು ಅದರ ಬುಡಕ್ಕೆ ಅಥವಾ ಬೇರಿಗೆ ನಾವು ಪೋಷಕಾಂಶ ನೀಡಬೇಕೆ ಹೊರತು, ಮರದ ರೆಂಬೆ ಕೊಂಬೆ ಎಲೆಗಳಿಗಲ್ಲ. ಹಾಗೆಯೇ ದೇಶದ ಪ್ರಗತಿಯಾಗ ಬೇಕಾದದ್ದು ಹಳ್ಳಿಯಿಂದ ದಿಲ್ಲಿವರೆಗೆ ಅಂದರೆ ಮೊದಲು ದೇಶದ ಹಳ್ಳಿಗಳ ಅಭಿವೃದ್ಧಿಯಾಗಬೇಕು. ಗಾಂಧಿ ಆಶಯದಂತೆ ಗ್ರಾಮ ರಾಜ್ಯ ಆಗಬೇಕು. ಅದರೆ ಅದು ಕನಸೇ ಆಗಿದೆ.
ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ!
ಅಭಿವೃದ್ಧಿಯ ಹೆಸರಿನಲ್ಲಿ ಆಗುವ ಭ್ರಷ್ಟಾಚಾರಕ್ಕೆ ಇತಿ ಹಾಡಬೇಕು, ಇದರ ಬಗ್ಗೆ ಆಡಳಿತ ಜವಾಬ್ದಾರಿ ತೆಗೆದುಕೊಳ್ಳಬೇಕು.
ಯಾವುದೋ ಒಬ್ಬ ಸಾಮಾನ್ಯ ವ್ಯಕ್ತಿ ಮಾಡಲಾಗದ ಕೆಲಸವನ್ನು ಆಡಳಿತ ಮಂಡಳಿ, ಅಧಿಕಾರಿಗಳು ಮಾಡಬಹುದು, ಅದೇ ಮುಖ್ಯ ಉದ್ದೇಶವಲ್ಲವೇ ,ನಾವು ಜನನಾಯಕನನ್ನು ಮತದಾನದ ಮೂಲಕ ಆಯ್ಕೆ ಮಾಡುವುದು..?. ಆದರೆ ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿ ಹೋಗಿದೆ. ಆದ್ದರಿಂದ ಅಭಿವೃದ್ಧಿ ಮರೆಯಾಗಿದೆ. ಇನ್ನು ಭಾರತದಲ್ಲಿ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಆಗಬೇಕಿದೆ.
ಪ್ರತಿ ತಾಲೂಕಿನ ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳಿವೆ, ನೆಟ್ವರ್ಕ್ ಸಮಸ್ಯೆ , ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ನೀರಿನ ಸಮಸ್ಯೆ, ಶಾಲೆ ಕಾಲೇಜುಗಳ ಸಮಸ್ಯೆ, ಬಸ್ ಸಮಸ್ಯೆ , ಚರಂಡಿ ಸಮಸ್ಯೆ, ನಿರುದ್ಯೋಗ ಸಮಸ್ಯೆ ಅರೋಗ್ಯ ಸಮಸ್ಯೆ ಇತ್ಯಾದಿ ಇತ್ಯಾದಿ.
ಇವುಗಳಿಗೆ ಮುಖ್ಯ ಕಾರಣ ಗ್ರಾಮಪಂಚಾಯಿತಿಗೆ ಸಂಭಂದಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನ, ಹಾಗೂ ಅಧಿಕಾರಿಗಳು ನಗರಾಭಿವೃದ್ಧಿಗೆ ನೀಡುವಷ್ಟು ಗಮನ ಗ್ರಾಮಾಭಿವೃದ್ಧಿಗಳಿಗೆ ನೀಡದೆ ಇರುವುದು ಸಹ ಮುಖ್ಯ ಕಾರಣವಾಗಿದೆ. ಹಾಗೂ ರಾಷ್ಟ್ರಮಟ್ಟದ ಯೋಜನೆಗಳು ಹಳ್ಳಿಗರಿಗೆ ಮುಟ್ಟದೆ ಇರುವುದು ಸಹ ಹಳ್ಳಿಗರ ಹಿನ್ನಡೆಗೆ ಕಾರಣವಾಗಿದೆ. ಆಡಳಿತ ಮಂಡಳಿ ಗ್ರಾಮಗಳ ಉದ್ದಾರದ ಬಗ್ಗೆ ಎಚ್ಚೆತ್ತುಕೊಳ್ಳು ಬೇಕು ಆಗ ನಿಜವಾದ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರ ಗ್ರಾಮ ಹಾಗೂ ಸಣ್ಣ ಸಣ್ಣ ಪಟ್ಟಣಗಳ ಕಡೆ ನೋಡದಿದ್ದರೆ ಖಂಡಿತಾ ದೇಶ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.
ಲೇಖನ: ಅನನ್ಯ