ಆಳ್ವಾಸ್ ವಿರಾಸತ್ ಸಖತ್ ಗುರೂ..!
– ರಾಜ್ಯದಲ್ಲೆ ಅದ್ದೂರಿ ಕಾರ್ಯಕ್ರಮ: ಮಹಾಮೇಳಗಳಿಗೆ ಚಾಲನೆ
– ಕೃಷಿ, ಆಹಾರ, ಫಲಪುಷ್ಪ, ಕರಕುಶಲ, ಪ್ರಾಚ್ಯವಸ್ತು, ಚಿತ್ರಕಲಾ ಮತ್ತಿತರ ಮಹಾಮೇಳ: ರಾಜ್ಯದ ಮೂಲೆ ಮೂಲೆಯಿಂದ ಜನ
– ಡಿ.10ರಿಂದ ಡಿ.15ರವರೆಗೆ ಮೂಡಬಿದಿರೆಯಲ್ಲಿ ಹಬ್ಬ
NAMMUR EXPRESS NEWS
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಡಿ.10ರಿಂದ ಡಿ.15ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ಆಳ್ವಾಸ್ ವಿರಾಸತ್’ ಇದೀಗ ದೇಶದ ಗಮನ ಸೆಳೆದಿದೆ. ಲಕ್ಷ ಲಕ್ಷ ಜನರು ಭಾಗಿಯಾಗಿದ್ದು, ನೂರಾರು ಮಳಿಗೆಗಳು ಇವೆ. ಕರಾವಳಿಯ ಯುವಜನತೆ ಕೃಷಿ ವಿಮುಖರಾಗುತ್ತಿದ್ದು, ಮಣ್ಣಿನೆಡೆಗೆ ಅವರನ್ನು ಸೆಳೆಯುವ ಇಂತಹ ಕಾರ್ಯಕ್ರಮ ಮಾದರಿಯಾಗಿದೆ. ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ಸಾವಿರಾರು ಜನರ ಗಮನ ಸೆಳೆಯುತ್ತಿದೆ. ಕೃಷಿ ಮೇಳದಲ್ಲಿ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಮಂದಿ ಭಾಗಿಯಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ -ರೋವರ್ಸ್ ರೇಂಜರ್ಸ್ ಸಾಂಸ್ಕೃತಿಕ ಶಿಬಿರ, ಕರಕುಶಲ ಮೇಳ, ಆಹಾರ ಮೇಳ ಕೂಡ ನಡೆಯುತ್ತಿದೆ.
ಡಾ.ಎಂ.ಮೋಹನ ಆಳ್ವರಿಂದ ಎಲ್ಲರಿಗೂ ಸ್ವಾಗತ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಆಳ್ವಾಸ್ ಸಂಸ್ಥೆಯ ಎಲ್ಲಾ ಕಾರ್ಯಗಳು ಕಲಿಕೆಯ ಭಾಗ. ಬದುಕಿನ ಆಂದೋಲನದ ಅಂಗ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರು.
ಗಣ್ಯರ ಸಮಾಗಮ: ವಿವಿಧ ರಾಜ್ಯದಿಂದಲೂ ಆಗಮನ
ಆಳ್ವಾಸ್ ವಿರಾಸತ್ ಸಂಭ್ರಮಕ್ಕೆ ಸುಮಾರು 15 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ, ರಾಷ್ಟ್ರದ ಅನೇಕ ಗಣ್ಯರು ಮೊದಲ ದಿನ ಭಾಗಿಯಾಗಿದ್ದಾರೆ.
ಶಿವಮೊಗ್ಗ ಕೃಷಿ ವಿವಿ ಕುಲಪತಿ ಜಗದೀಶ್, ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯಸ್ಥ ಸಿಂದ್ಯಾ,ಮೂಡುಬಿದಿರೆಯ ಎಂ.ಸಿ.ಎಸ್. ಬ್ಯಾಂಕ್ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ , ಮೂಡುಬಿದಿರೆ ಎಂ.ಸಿ.ಎಸ್. ಬ್ಯಾಂಕ್ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ. ಧನಂಜಯ್ ಬಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಶಶಿಧರ್ , ಉಡುಪಿಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಪುತ್ತೂರಿನ ನವನೀತ್ ನರ್ಸರಿಯ ವೇಣುಗೋಪಾಲ ಎಸ್. ಜೆ, ಮಂಗಳೂರಿನ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪೊನ್ನಪ್ಪ, ಧನಲಕ್ಷ್ಮಿ ಕ್ಯಾಶೂಸ್ ನ ಆಡಳಿತ ನಿರ್ದೇಶಕ ಕೆ ಶ್ರೀಪತಿ ಭಟ್, ಸಿರಿ ಸಂಸ್ಥೆಯ ಜನಾರ್ದನ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಸ್ಕೌಟ್ಸ್ ಮತ್ತು ಗೈಡ್ಸ್ ನ ನಿರ್ದೇಶಕ ಪ್ರಭಾಕರ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.