ಔಷಧಿ ಮಾಫಿಯಾಕ್ಕೆ ಬಲಿಯಾಗುತ್ತಿದ್ದಾರೆ ಬಾಣಂತಿಯರು!?
– ರಾಜ್ಯದಲ್ಲಿ ಮತ್ತೆ 11 ಬಾಣಂತಿಯರ ಸಾವು
– ಆರ್ಎಲ್ ಫ್ಲುಯಿಡ್ ನಿಂದ ಉಸಿರು ಚೆಲ್ಲುತ್ತಿರುವ ಬಾಣಂತಿಯರು
– ಮೃತ ಬಾಣಂತಿಯರ ಕುಟುಂಬಸ್ಥರಿಂದ ಉಗ್ರ ಹೋರಾಟಕ್ಕೆ ಸಜ್ಜು
– ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಡ ಜೀವಗಳು ಕಾಣುತ್ತಿಲ್ವಾ?
NAMMUR EXPRESS NEWS
ರಾಯಚೂರು: ಬಳ್ಳಾರಿ ಬಳಿಕ ರಾಯಚೂರಿನಲ್ಲೂ ಬಾಣಂತಿಯರ ಮರಣ ಮೃದಂಗ ಶುರುವಾಗಿದೆ. ಅಕ್ಟೋಬರ್ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 11 ಬಾಣಂತಿಯರ ಸಾವಾಗಿದೆ. ಬಾಣಂತಿಯರ ಸಾವಿನ ಸರಮಾಲೇ ಶುರುವಾಗಿದ್ದೇ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ, ಮತ್ತೆ ಬಳ್ಳಾರಿ ಕೇಸ್ಗಳಂತೆ ಇಲ್ಲಿಯೂ ಪಶ್ಚಿಮ ಬಂಗಾಳ ಕಂಪೆನಿಯ ಆರ್ಎಲ್ ಫ್ಲುಯಿಡ್ ಅನ್ನು ಬಾಣಂತಿಯರಿಗೆ ನೀಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಆರ್ಎಲ್ ಫ್ಲುಯಿಡ್ನ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಬೆಂಗಳೂರು ಹಾಗೂ ಹೈದರಾಬಾದ್ ಲ್ಯಾಬ್ಗಳಿಂದ ವರದಿ ಬಂದಿದೆ. ಅದು ಸರ್ಕಾರಕ್ಕೂ ತಲುಪಿದೆ. ಆ ವರದಿಯಲ್ಲಿ ಆರ್ಎಲ್ ಫ್ಲುಯಿಡ್ ಕಳಪೆ ಎಂಬ ವಿಷಯ ಬಹಿರಂಗವಾಗಿದ್ದು ಬೆಚ್ಚಿ ಬೀಳಿಸಿತ್ತು. ಜಿಲ್ಲೆಯಲ್ಲಿ ನಡೆದ ಉಳಿದ ಕೇಸ್ಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವೈದ್ಯರ ವಿರುದ್ದ ಕ್ರಮಕೈಗೊಳ್ಳುವಂತೆ ಮೃತ ಬಾಣಂತಿಯರ ಕುಟುಂಬಸ್ಥರು ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಮಧ್ಯೆ ಸಿಂಧನೂರು ತಾಲ್ಲೂಕು ಆಸ್ಪತ್ರೆಯಂತೆ ರಿಮ್ಸ್ ಆಸ್ಪತ್ರೆಯಲ್ಲೂ ನಾಲ್ಕು ಜನ ಬಾಣಂತಿಯರು ಉಸಿರು ಚೆಲ್ಲಿದ್ದು, ರಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಮೂಲದ ಉಮಾ ತನ್ನ ಹಸುಗೂಸು ಸಮೇತ ರಿಮ್ಸ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಬಳಿಕ ಜಾಗಿರ ವೆಂಕಟಾಪುರ ಗ್ರಾಮದ ರೆಹಮತ್ ಬೀ ಮಗುವಿಗೆ ಜನ್ಮ ನೀಡಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ರಿಮ್ಸ್ ನಲ್ಲಿ ಅಸುನೀಗಿದ್ದಾರೆ. ನಂತರ ರಾಯಚೂರು ತಾಲ್ಲೂಕಿನ ರಂಗಾಪುರ ಗ್ರಾಮದ ನಿಂಗಮ್ಮ ಎಂಬ ಮಹಿಳೆ ಸಾಮಾನ್ಯ ಹೆರಿಗೆಯಾಗಿ ಮನೆ ಸೇರಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ರಿಮ್ಸ್ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಿಮ್ಸ್ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಹೊಸ ವರ್ಷದ ದಿನವೇ ಮಸೀದಾಪುರ ಗ್ರಾಮದ ಶಿವಲಿಂಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗು ಸಮೇತ ತಾಯಿಯೂ ರಿಮ್ಸ್ನಲ್ಲೇ ಸಾವನ್ನಪ್ಪಿದ್ದಾರೆ. ಈಕೆಯ ಪೋಷಕರು ಡಿಸ್ಚಾರ್ಜ್ ಮಾಡಿ ಬೇರೆಡೆ ಕರೆದೊಯ್ಯುತ್ತೇವೆ ಎಂದರೂ ಕೂಡ ರಿಮ್ಸ್ ಆಸ್ಪತ್ರೆ ವೈದ್ಯರು ಡಿಸ್ಚಾರ್ಜ್ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಆಕೆಯ ಸಾವಾಗಿದೆ. ಆಕೆಯ ಸಾವಿಗೆ ರಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಎಂದು ಶಿವಲಿಂಗಮ್ಮ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಭಾಸ್ಕರ್, ಆಕೆಗೆ ರಕ್ತದ ಒತ್ತಡ ಹೆಚ್ಚಿತ್ತು. ಡೆಲಿವರಿಗೂ ಮುಂಚೆಯೂ ರಕ್ತದೊತ್ತಡ ನಡೆಯುತ್ತಿತ್ತು. ಆ ಬಳಿಕ ಹೆರಿಗೆ ಬಳಿವೂ ಹೆಚ್ಚಾಗಿತ್ತು. ಹೀಗಾಗಿ ಆರೋಗ್ಯದಲ್ಲಿ ಏರುಪೇರಾಗಿ ಸಾವಾಗಿದೆ ಎಂದಿದ್ದಾರೆ.ರಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ಬಾಣಂತಿಯರ ಸಾವಾಗಿದ್ದು ನಾಲ್ಕು ಕೇಸ್ಗಳಲ್ಲೂ ಮೃತರ ಕುಟುಂಬಸ್ಥರು ವೈದ್ಯರ ನಿರ್ಲಕ್ಷ ಅಂತಲೇ ಆರೋಪ ಮಾಡಿದ್ದಾರೆ. ಆದರೆ, ಈವರೆಗೆ ಸರ್ಕಾರವಾಗಲಿ, ಆರೋಗ್ಯ ಇಲಾಖೆ ಆಗಲಿ ಯಾವುದೇ ಕ್ರಮಗೈಕೊಂಡಿಲ್ಲ.