ಬಿಜೆಪಿ ಆಯ್ತು, ಈಗ ಕಾಂಗ್ರೆಸ್ಸಲ್ಲೂ ಬಣ ರಾಜಕೀಯ!
– ಡಿಕೆಶಿ ವಿದೇಶ ಪ್ರವಾಸದಲ್ಲಿದ್ದಾಗಲೇ ಜಾರಕಿಹೊಳಿ ಮನೆಯಲ್ಲಿ ಔತಣಕೂಟ
– ಕೃಷಿ ಸಚಿವ ಚಲುವರಾಯಸ್ವಾಮಿ ನಿವಾಸದಲ್ಲಿ ಒಕ್ಕಲಿಗ ಶಾಸಕ, ಸಚಿವರ ಸಭೆ
NAMMUR EXPRESS NEWS
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ‘ಡಿನ್ನರ್ ಪಾಲಿಟಿಕ್ಸ್’ ಮುಂದುವರಿದಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅಹಿಂದ ಸಚಿವರು, ಶಾಸಕರು ಸಭೆ ಸೇರಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಒಕ್ಕಲಿಗರ ಬಲಪ್ರದರ್ಶನಕ್ಕೆ ಒಕ್ಕಲಿಗ ನಾಯಕರು ಸಭೆ ನಡೆಸಿದ್ದಾರೆ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್ನಲ್ಲೂ ಬಣ ಗದ್ದಲ ಸದ್ದು ಮಾಡುತ್ತಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಔಪಚಾರಿಕ ಭೋಜನಕೂಟ ಆಯೋಜಿಸಲಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವಿದೇಶದಲ್ಲಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ಈ ಭೋಜನಕೂಟದಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿವೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ, ಕೃಷಿ ಚಲುವರಾಯ ಸ್ವಾಮಿ ನಿವಾಸದಲ್ಲಿ ಒಕ್ಕಲಿಗ ಶಾಸಕರು, ಸಚಿವರು ಸಭೆ ನಡೆಸುವ ಮೂಲಕ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಗೆ ಠಕ್ಕರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ಪ್ರತಿ ಶಾಸಕರು ನಿಲ್ಲಬೇಕು. ಮುಖ್ಯಮಂತ್ರಿ ಅಥವಾ ಅಧ್ಯಕ್ಷ ಸ್ಥಾನದ ವಿಷಯದಲ್ಲಿಯೂ ಡಿಕೆಶಿ ಪರವಾಗಿ ಬ್ಯಾಟ್ ಬೀಸಬೇಕು. ಅಹಿಂದ ಸಮುದಾಯದ ನಾಯಕರು ಒಂದಾಗಿರುವ ಈ ಸಮಯ ದಲ್ಲಿ ಡಿಕೆ ಬೆಂಬಲಕ್ಕೆ ಒಕ್ಕಲಿಗರು ನಿಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗುತ್ತದೆ ಎನ್ನುವ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಶಕ್ತಿ ಪ್ರದರ್ಶನದ ಸಭೆ
ಗುರುವಾರ ರಾತ್ರಿ ನಡೆದ ಡಿನ್ನರ್ ಮೀಟಿಂಗ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ, ಡಾ.ಜಿ. ಪರಮೇಶ್ವರ, ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ ಇದ್ದರು. ಇವರೊಂದಿಗೆ ಸುಮಾರು 30 ಶಾಸಕರೂ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಮಾತ್ರ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಹಿಂದ ಸಮುದಾಯದ ಒಗ್ಗಟ್ಟು ಪ್ರದರ್ಶನ ಮಾಡಿದ ಶಾಸಕರಿಗೆ ತಿರುಗೇಟು ನೀಡಲು ಶುಕ್ರವಾರ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ನಿವಾಸದಲ್ಲಿ ಒಕ್ಕಲಿಗ ಶಾಸಕರು ಸಭೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಎಸ್.ಎಂ.ಕೃಷ್ಣ ಸ್ಮರಣಾರ್ಥ ಕಾರ್ಯಕ್ರಮ ರೂಪಿಸಲು ಸಭೆ ನಡೆಸಲಾಗಿದೆ ಎನ್ನಲಾಗುತ್ತಿದ್ದರೂ, ಅಹಿಂದ ಸಮುದಾಯದ ಡಿನ್ನರ್ ಮೀಟಿಂಗ್ನ ವಿಷಯಗಳೇ ಪ್ರಸ್ತಾಪವಾಗಿದೆ.