ಬಗರ್ ಹುಕುಂ ನಿಯಮ ಸಡಿಲ!?
– ಜನವರಿಯಲ್ಲಿ ಜನರಿಗೆ ಸಿಗಲಿದೆ ಸಾಗುವಳಿ ಚೀಟಿ
– ಅರ್ಜಿದಾರ ಮೃತಪಟ್ಟರೆ ಅರ್ಹ ಕುಟುಂಬಸ್ಥರಿಗೆ ಭೂ ಸೌಲಭ್ಯ
– ಸರ್ಕಾರದ ಹೊಸ ನಿಯಮ ಏನೇನು…?
NAMMUR EXPRESS NEWS
ಬೆಂಗಳೂರು : ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಗರ್ ಹುಕುಂ ಯೋಜನೆಯ ನಿಯಮವನ್ನು ಕೊಂಚ ಸಡಿಲಿಸುವುದಕ್ಕೆ ಸರ್ಕಾರ ಮುಂದಾಗಿದೆ. ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ದುರದೃಷ್ಟವಕಾತ್ ಮೃತಪಟ್ಟಲ್ಲಿ ಅಂಥವರ ಕುಟುಂಬಸ್ಥರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಿ ಡಿಜಿಟಲ್ ಸಾಗುವಳಿ ಚೀಟಿ ನೀಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜ್ಯದ ಎಲ್ಲಾ ತಹಸೀಲ್ದಾರ್ ಹಾಗೂ ಎ ಡಿ ಎಲ್ ಆರ್ ಗಳಿಗೆ (ಭೂ ದಾಖಲೆಯ ಸಹಾಯಕ ನಿರ್ದೇಶಕ) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ತಾಸಿಲ್ದಾರ್ ಹಾಗೂ ಎ ಡಿ ಎಲ್ ಆರ್ ಅಧಿಕಾರಿಗಳ ಜೊತೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಅನುಕೂಲಸ್ಥರಿಗೆ ಎಲ್ಲಾ ಮಾಹಿತಿ ಇರುತ್ತದೆ. ತಮಗೆ ಬೇಕಾದ ಸರ್ಕಾರಿ ಸವಲತ್ತನ್ನು ತಾವೇ ಪಡೆದುಕೊಳ್ಳುತ್ತಾರೆ. ಆದರೆ, ಬಡವರಿಗೆ ಮಾಹಿತಿ ಕೊರತೆ ಇರುತ್ತದೆ ಅಂತಹವರಿಗೆ ಅಧಿಕಾರಿಗಳೇ ಮಾಹಿತಿ ನೀಡಿ ಸರ್ಕಾರಿ ಸವಲತ್ತು ತಲುಪಿಸಬೇಕು. ಬಗರ್ ಹುಕುಂ ಅರ್ಜಿ ಅರ್ಹವಾಗಿದ್ದಲ್ಲಿ ಅಧಿಕಾರಿಗಳೇ ಜವಾಬ್ದಾರಿ ಹೊತ್ತು ಜಮೀನು ಮಂಜೂರು ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.