ಹೊಸ ವರ್ಷಕ್ಕೆ ಮಳೆ ಸಾಧ್ಯತೆ!
– ವಾಯುಭಾರ ಕುಸಿತ: ಶನಿವಾರ, ಭಾನುವಾರ ಮಳೆ!
– ಹಲವು ಜಿಲ್ಲೆಗಳಿಲ್ಲಿ ಮಳೆ: ಹವಾಮಾನ ಇಲಾಖೆ ಅಲರ್ಟ್
NAMMUR EXPRESS NEWS
ಬೆಂಗಳೂರು: ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ ದಕ್ಷಿಣ ಒಳನಾಡಿನಲ್ಲಿ ಡಿ. 25 ರಿಂದ ಥಂಡಿಗಾಳಿ, ತುಂತುರು ಮಳೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆಯಾಗಿದ್ದು, ಶನಿವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಭಾನುವಾರದ ನಂತರ ಮಳೆ ಪ್ರಮಾಣ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಚಿತ್ರದುರ್ಗ, ಬೆಂಗಳೂರು, ವಿಜಯಪುರ, ಹಿರಿಯೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಇಂದು ಎಲ್ಲೆಲ್ಲಿ ಮಳೆ : ಡಿ.28 ಶನಿವಾರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ವಿಜಯನಗರ, ಕೊಡಗು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
– ವಾಡಿಕೆಗಿಂತ ಈ ವರ್ಷ ಅಧಿಕ ಮಳೆ
ರಾಜ್ಯದಲ್ಲಿ ಈ ವರ್ಷ ಶೇ.19 ರಷ್ಟು ಅಧಿಕ ಮಳೆಯಾಗಿದೆ. ವಾಡಿಕೆಯ ಪ್ರಕಾರ, ಡಿ.27 ವರೆಗೆ 1155 ಮಿ.ಮೀ. ಮಳೆಯಾಗಬೇಕಿತ್ತು. ಸದ್ಯ 1385 ಮಿ.ಮೀ. ಮಳೆಯಾಗಿದೆ. ಹಿಂಗಾರಿನಲ್ಲಿ ವಾಡಿಕೆಯ ಪ್ರಕಾರ, 182 ಮಿ.ಮೀ. ಬದಲಿಗೆ 238 ಮಿ.ಮೀ. ಮಳೆಯಾಗಿದೆ. ಆದರೆ ಕೃಷಿ ಹಾಗೂ ತರಕಾರಿ ಬೆಳೆಗಳಿಗೆ ಡಿಸೆಂಬರ್ ಮಳೆ ಮಾರಕವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಶೀತ ಗಾಳಿ ಬೀಸುತ್ತಿದೆ. ಹೀಗಾಗಿ ಕೆಲವರು ಮನೆಯಿಂದ ಆಚೆ ಬರಲು ಹೆದರಿದರೆ, ಮತ್ತೆ ಕೆಲವರು ಸ್ವೆಟರ್, ಜರ್ಕಿನ್, ಟೋಪಿ ಧರಿಸಿ ಛತ್ರಿ ಹಿಡಿದು ಸಾಗುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿಸಾಗುವವರು ರೈನ್ಕೋಟ್, ಜರ್ಕಿನ್ ಏರಿಸಿ ಸಾಗುತ್ತಿದ್ದಾರೆ. ಮತ್ತೊಂದೆಡೆ ಬಟ್ಟೆ ಒಗೆದು ಅರೆ ಒಣಗುವಷ್ಟರಲ್ಲಮಳೆರಾಯನ ಆಗಮನವಾಗುತ್ತದೆ. ಇದರಿಂದ ಜನರು ಬೇಸತ್ತಿದ್ದಾರೆ.