ಅನ್ನದಾತನಿಗೆ ನಮಸ್ಕಾರ!
– ಡಿ.23 ರಾಷ್ಟ್ರೀಯ ರೈತ ದಿನ: ರೈತರಿಗೆ ನಮನ
– ಕೃಷಿ ಭಾರತದ ಉಸಿರು.. ಜೈ ಜವಾನ್.. ಜೈ ಕಿಸಾನ್!
NAMMUR EXPRESS NEWS
ಭಾರತ ಕೃಷಿ ಪ್ರಧಾನ ದೇಶ. ಕೃಷಿಯೇ ಇಲ್ಲಿ ಬದುಕಿನ ಜೀವಾಳ. ದೇಶದಲ್ಲಿ ಒಂದು ಕಾಲದಲ್ಲಿ ಕೃಷಿಗೆ ಎಷ್ಟು ಗೌರವ ಎಂದರೆ ವೇತನ ಪಡೆಯುವ ಉದ್ಯೋಗಗಳಿಂದ ಹೊರಬಂದು ಕೃಷಿಯನ್ನೇ ಕೈಗೆತ್ತಿಕೊಳ್ಳುತ್ತಿದ್ದರು. ಇದರ ಹಿಂದಿರುವುದು ಸ್ವಾಭಿಮಾನ ಹಾಗೂ ಸ್ವತಂತ್ರ ಬದುಕಿನ ಹಂಬಲ. ನಮ್ಮ ಬಾಲ್ಯದ ದಿನಗಳಲ್ಲಿ ಕಂಡ ಕೃಷಿಯ ಖುಷಿ ಇಂದು ನೆನಪು ಮಾತ್ರ. ಅವಿಭಕ್ತ ಕುಟುಂಬ. ಮನೆಯವರೆಲ್ಲರ ಕಾಯಕ ಕೃಷಿ. ಜಾನುವಾರುಗಳೇ ಉಳುಮೆ, ಹಾಲು ಹಾಗೂ ಕೃಷಿಗೆ ಅಗತ್ಯವಾದ ಗೊಬ್ಬರಕ್ಕೆ ಆಧಾರ. ಯಂತ್ರಗಳಿಲ್ಲದ ಕಾಲ. ಸಾವಯವ ಕೃಷಿಗೆ ಆದ್ಯತೆ.
ಮರದ ನೇಗಿಲು, ನೊಗಗಳೇ ಕೃಷಿಕನ ಉಳುಮೆಯ ಆಯುಧ. ಮಳೆಗಾಲದ ತುಸು ಬಿರುಸಿನ ಮಳೆಯ ನಡುವೆಯೂ ಉತ್ಸಾಹದ ನಾಟಿಕಾರ್ಯ. ಮನೆಮಂದಿಯೆಲ್ಲ ಗದ್ದೆಯ ನಾಟಿ ಕಾಯಕದಲ್ಲಿ. ಮನೆಯ ಕಣದಲ್ಲಿ ಬೆಳೆದ ಭತ್ತವನ್ನು ಒಡಲೊಳು ಹೊತ್ತು ನಿಂತ ತಿರಿ. ಭತ್ತದೊಂದಿಗೆ ಸಾವಯವ ಆಧಾರಿತ ತರಕಾರಿಗಳ ಬೆಳೆ. ಮನೆಗೆ ಸಾಕಾಗಿ ಮಾರುವ ಮಟ್ಟದಲ್ಲಿ ಹುಲುಸಾದ ಬೆಳೆ. ಅಂದಿನ ಅವಿಭಕ್ತ ಕೃಷಿಕುಟುಂಬದ ಮೊದಲ ನಿರೀಕ್ಷೆ ಬದುಕಿಗೆ ಅಗತ್ಯವಾದಷ್ಟು ಆಹಾರ ಉತ್ಪಾದನೆ. ಬೆಳೆದ ಕೃಷಿ ಉತ್ಪನ್ನಗಳಿಂದ ರುಚಿಯಾದ ಹಾಗೂ ಸತ್ವ ಭರಿತವಾದ ಊಟ. ಮಾನಸಿಕವಾಗಿಯೂ ಆರೋಗ್ಯಪೂರ್ಣ ಪರಿಸರ. ಹಿರಿಯರಿಗೆ ಮನ್ನಣೆ.
ಇಂದಿನ ಸ್ಥಿತಿ ಬದಲಾಗಿದೆ…!
ಇಂದಿನ ಕೃಷಿ ಪರಿಸರ ಬದಲಾಗಿದೆ. ಕೃಷಿ ಕ್ಷೇತ್ರಕ್ಕೆ ಕಾಲಿಡಲೂ ಹಿಂಜರಿಕೆ. ಕೃಷಿಯನ್ನು ಕೈಹಿಡಿವ ವಿದ್ಯಾವಂತ ಯುವಕೃಷಿಕರಿಗೆ ಕನ್ಯೆ ಕೈಹಿಡಿವಳೋ ಇಲ್ಲವೋ? ಎಂಬ ಸಂದೇಹ. ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಇಂದು ವಿಭಕ್ತ ಕುಟುಂಬಗಳಾಗಿವೆ. ಕೃಷಿಕುಟುಂಬದ ವಿದ್ಯಾವಂತರು ಹಳ್ಳಿಯ ಜೀವನವನ್ನು ತೊರೆಯಲು ಮುಂದಾಗುತ್ತಿದ್ದಾರೆ. ವೇತನ ಎಷ್ಟೇ ಸಿಗಲಿ, ನಗರದಲ್ಲಿ ಬದುಕು ಬೇಕೆಂಬ ಬಯಕೆ. ಹಾಗಾಗಿ ಹಳ್ಳಿಗಳಲ್ಲಿ ಕೃಷಿಕುಟುಂ ಬಗಳು ಖಾಲಿಯಾಗುತ್ತಿವೆ. ಈ ಸಮಸ್ಯೆಗಳ ನಡುವೆ ಯೂ ಕೃಷಿಯನ್ನು ಕೈ ಬಿಡದ ಕೆಲವು ಮಂದಿ ನಮ್ಮ ನಡುವೆ ಇದ್ದಾರೆ. ಹಳೆಯ ಪದ್ಧತಿಯ ಜಾಗದಲ್ಲಿ ಹೊಸ ಪದ್ಧತಿ ಕೃಷಿಕ್ಷೇತ್ರವನ್ನು ಆವರಿಸಿದೆ. ರಾಸಾಯನಿಕ ಗೊಬ್ಬರಗಳ ಬೇಡಿಕೆ ಹೆಚ್ಚುತ್ತಿದೆ.
ಕಾರ್ಮಿಕರ ಕೊರತೆಯ ಕೂಗಿಗೆ ಯಂತ್ರಗಳು ಕೊಂಚ ಪರಿಹಾರ ಒದಗಿಸಿವೆ. ಆದರೂ ಹೊಸ ವಿಧಾನದಿಂದ ಕೃಷಿ ಭೂಮಿಯ ಮಣ್ಣಿನ ಸತ್ವ ವರ್ಷದಿಂದ ವರ್ಷಕ್ಕೆ ಕುಸಿಯಬಹುದೆಂಬ ಆತಂಕ ಕಾಡುತ್ತಿದೆ. ಲಾಭದಾಯಕವಾದ ವಾಣಿಜ್ಯ ಬೆಳೆಗಳಿಂದಾಗಿ ಆಹಾರಕ್ಕೆ ಅಗತ್ಯವಾದ ಭತ್ತದ ಬೆಳೆ ಬತ್ತಲಾರಂಭಿಸಿದೆ. ಕೃಷಿಯೋಗ್ಯ ಭೂಮಿಯಲ್ಲಿ ಗಗನ ಚುಂಬಿ ಕಟ್ಟಡಗಳ ನಿರ್ಮಾಣ ಮುಂದುವರಿ ದರೆ ಕೃಷಿಗೆ ಮತ್ತಷ್ಟು ಹೊಡೆತ. ಕೃಷಿಭೂಮಿ ಯನ್ನು ಹಡಿಲು ಭೂಮಿಯನ್ನಾಗಿರಿಸಿದರೆ ಅದೂ ಇಳುವರಿಗೆ ಆತಂಕ.
ಮುಂದಿನ ದಿನ: ಕೃಷಿ ಉಳಿಯಲು ಮೊದಲು ಆಗಬೇಕಾದ ಕೆಲಸ ಕೃಷಿ ಕ್ಷೇತ್ರವನ್ನು ಆಕರ್ಷಕವನ್ನಾ ಗಿರಿಸಲು ಯೋಜನೆಗಳನ್ನು ರೂಪಿಸುವುದು. ವಿದ್ಯಾ ವಂತ ಯುವಕರು ನಗರದತ್ತ ವಲಸೆ ಹೋಗುವುದನ್ನು ತಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹದ ವಾತಾವರಣದ ನಿರ್ಮಾಣ. ಕೃಷಿಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರ ಸ್ಪಂದನ. ಕೃಷಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕ್ರಮ ಗಳು. ಕೃಷಿಯಲ್ಲಿ ಅಗತ್ಯವಾದ ಯಂತ್ರಗಳ ಪ್ರಯೋಗ ಹಾಗೂ ಈ ಕುರಿತು ಅಗತ್ಯ ಮಾಹಿತಿ. ಕೃಷಿಯನ್ನು ಲಾಭದಾಯಕವನ್ನಾಗಿ ರೂಪಿಸಲು ಅಗತ್ಯವಾದ ಸಲಹೆ ಹಾಗೂ ಮಾರ್ಗದರ್ಶನ. ಭಾರತದ ಪ್ರಧಾನಿಯಾಗಿದ್ದ ಚರಣ್ಸಿಂಗ್ ಅವರ ಜನ್ಮದಿನವಾದ ಡಿ.23ರಂದು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ.
ದೇಶದ ಒಳಗಿನ ಸೇನಾನಿಗಳಾದ ಎಲ್ಲಾ ರೈತರಿಗೆ ಶುಭಾಶಯಗಳು