‘ಕುಲ ಕುಲ ಕುಲವೆಂದು ಹೊಡೆದಾಡದಿರಿ’..!
*ನಾಡಿನ ಸಮಸ್ತ ಜನತೆಗೆ ಸಂತ ಕನಕದಾಸ ಜಯಂತಿಯ ಶುಭಾಶಯಗಳು*
* ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ*
ವಿಶೇಷ ವರದಿ: ಸುರಕ್ಷಾ ಕೊಯಿಲಾ
NAMMUR EXPRESS NEWS
ಕರುನಾಡ ದಾಸವರೇಣ್ಯ ಶ್ರೇಷ್ಠ ದಾರ್ಶನಿಕ ಕನಕದಾಸರ ಜಯಂತಿ. ಕತ್ತಿ ಗುರಾಣಿ ಹಿಡಿದು ರಣಾಂಗಣದಲ್ಲಿ ಹೋರಾಡಿ ಶಸ್ತ್ರ ತ್ಯಜಿಸಿ ಕೈಯಲ್ಲಿ ತಂಬೂರಿ ಹಿಡಿದು ಕೀರ್ತನಕಾರನಾಗಿ, ಲೇಖನಿ ಹಿಡಿದು ಕವಿಯಾಗಿ, ಅಧ್ಯಾತ್ಮ ತತ್ವ ಹೇಳಿದ ದಾರ್ಶನಿಕನಾಗಿ ಬದಲಾದ ಸೋಜಿಗವೇ ಕನಕದಾಸರೆಂಬ ದಾಸವರೇಣ್ಯನ ಜೀವನ ವೃತ್ತಾಂತ.
ಕನಕ ದಾಸರ ಲೋಕದೃಷ್ಟಿಯ ವಿಸ್ತಾರ ಬಹಳ ದೊಡ್ಡದು. ಕನಕದಾಸರು ತಮ್ಮ ವಿಡಂಬನಾತ್ಮಕ ವೈಚಾರಿಕ ಚಿಂತನೆಯಿಂದಾಗಿ ಇತರ ಸಮಕಾಲೀನ ಭಕ್ತಿಪಂಥದ ಕೀರ್ತನಕಾರರಿಂದ ವಿಶಿಷ್ಟವಾಗುಳಿಯುತ್ತಾರೆ. ಜನಸಾಮಾನ್ಯರ ಸಾಮಾಜಿಕ ಬದುಕಿನ ನೋಟದೊಳಗೆಯೇ ಘನವಾದ ಅಧ್ಯಾತ್ಮ ತತ್ವಗಳ ಕಾಣ್ಕೆಯೊಂದನ್ನು ಸೃಷ್ಟಿಸುವ, ಅದರೊಳಗೆ ದಾರ್ಶನಿಕತೆ ತುಂಬುವ ಕನಕದಾಸರ ಶೈಲಿ ಅದ್ಭುತ.
ತನ್ನನ್ನು ತಾನೇ ‘ಕುರುಬ’ ಅಂತ ಕರೆದುಕೊಳ್ಳುತ್ತಾ, ತಾವು ಕಾಯುವ ಕುರಿಮಂದೆಯೊಳಗೆಯೇ ತಾತ್ವಿಕ ಉಪಮೆಗಳನ್ನು ಸೃಷ್ಟಿಸಿ ಆಧ್ಯಾತ್ಮಿಕತೆಯ ಆಳ ನೋಟವನ್ನೊದಗಿಸುವ ಕನಕದಾಸರ ಕಲ್ಪನಾಶಕ್ತಿ ಅಸದೃಶವಾದುದು. ಕುರಿಗಳ ಹಿಂಡನ್ನು ಮನುಷ್ಯರಿಗೂ, ಎಂಟು ಬಗೆಯ ಮದ-ಮಾತ್ಸರ್ಯಗಳನ್ನು ಟಗರುಗಳಿಗೂ, ವೇದ ಶಾಸ್ತ್ರ ಪುರಾಣಗಳನ್ನು ಕುರಿಗಳನ್ನು ಕಾಯುವ ಶ್ವಾನಗಳಿಗೂ, ಭಗವಂತನನ್ನು ತಮ್ಮ ಅಜ್ಜನಿಗೂ ಹೋಲಿಸಿ ಕುರುಬನ ಕುರಿಮಂದೆಯ ಹಿನ್ನೆಲೆಯಲ್ಲೇ ಅಧ್ಯಾತ್ಮದ ಕತೆ ಹೇಳುವ ಕನಕದಾಸರಿಗೆ ಅವರೇ ಸಾಟಿ.
ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರಾಗಿದ್ದು,ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ ಕನಕದಾಸ.
ಕನಕದಾಸರ ಸೇವೆ ನೆನೆಯುತ್ತ ಅವರಿಗೆ ನುಡಿ ನಮನಗಳು