ಇನ್ನು ಮುಂದೆ ಒಂದು ಜತೆ ಕೋಣ ಓಡಿಸಲು ಮಾತ್ರ ಅವಕಾಶ?
– ಕೋಣ ಹೊಡೆದ ಪ್ರಕರಣ ಸಾಬೀತಾದದಲ್ಲಿ ಮುಂದಿನ 2 ಕಂಬಳ ನಿಷೇಧ
– ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆ, ನಿಯಮ ಉಲ್ಲಂಘಿಸಿದರೆ ಕಂಬಳವೇ ನಿಷೇಧ?
NAMMUR EXPRESS NEWS
ಮೂಡುಬಿದಿರೆ: ಕಂಬಳಗಳಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡುವ, ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವ ಪ್ರಕರಣಗಳು ಸಾಬೀತಾದದಲ್ಲಿ ಅಂಥವರಿಗೆ ಮುಂದಿನ ಎರಡು ಕಂಬಳಗಳಿಗೆ ನಿಷೇಧ ವಿಧಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ ನೀಡಿದೆ.
ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿರುವ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣ ಸಮೀಪದ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಬೆಳಪು
ಡಾ. ದೇವಿಪ್ರಸಾದ್ ಅಧ್ಯಕ್ಷತೆಯಲ್ಲಿ ಜ. 2ರಂದು ಗುರುವಾರ ಜರುಗಿದ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. 24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬಗೊಳ್ಳುತ್ತಿದ್ದು, ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಉಲ್ಲಂಘನೆ ಸೂಕ್ತವಾದುದಲ್ಲ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಸಮಯ ಪರಿಪಾಲನೆಯನ್ನು ಕಟ್ಟುನಿಟ್ಟು ಮಾಡಲು ನಿಯಮಗಳನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಒಬ್ಬ ಓಟಗಾರರನಿಗೆ ಪ್ರತಿ ವಿಭಾಗದಲ್ಲೂ ಒಂದು ಜತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಅನಿವಾರ್ಯ ಸಂದರ್ಭದಲ್ಲಿ ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ಅನುಮತಿ ಪಡೆದ ಬಳಿಕ ಮಾತ್ರ ಎರಡು ಜತೆ ಕೋಣಗಳನ್ನು ಓಡಿಸಬಹುದು. ಉಳಿದಂತೆ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದು ಅವರು ವಿವರಿಸಿದರು. ಸಮಿತಿ ಅಧ್ಯಕ್ಷರು ತ್ರಿಶಾಲ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ತೀರ್ಪುಗಾರ ರಾಜೀವ್ ಶೆಟ್ಟಿ ಎಡೂರು, ಅಡ್ವೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.