ಇನ್ಮುಂದೆ ಪೊಲೀಸರಿಗೂ ಮೂಗುದಾರ?!
– ನೀವು ಸ್ಟಾರ್ ರೇಟಿಂಗ್ ಕೊಡಬಹುದು..
– ಪೊಲೀಸರ ಕಾರ್ಯವೈಖರಿಗೆ ಕ್ಯೂಆರ್ ಕೋಡ್
– ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಬಲ
NAMMUR EXPRESS NEWS
ಪೊಲೀಸ್ ಸೇವೆ ದೇಶದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡುತ್ತಿದೆ. ಕಾನೂನು ಸುವ್ಯವಸ್ಥೆ ಎಲ್ಲರಿಗೂ ಬೇಕು. ಈ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ ನಿಮ್ಮನ್ನು ಯಾವ ರೀತಿಯಾಗಿ ನಡೆಸಿಕೊಳ್ಳಲಾಯಿತು? ಪೊಲೀಸರು ನೀಡಿದ್ದ ಸೇವೆ ಇಷ್ಟವಾಯಿತೋ, ಇಲ್ಲೋ? ಹೀಗೆ ಏನೇ ಇದ್ರೂ ಈಗ ಸುಲಭವಾಗಿ ಮೇಲಾಧಿಕಾರಿಗಳಿಗೆ ತಿಳಿಸುವ ಅವಕಾಶವನ್ನ ಪೊಲೀಸ್ ಇಲಾಖೆ ಕಲ್ಪಿಸಿದೆ. ಯೋಜನೆಯ ಜಾರಿಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದೆ.
ಕ್ಯೂಆರ್ ಕೋಡ್ ಅಳವಡಿಕೆ
ಈಗಾಗಲೇ ರಾಜ್ಯದ ಹಲವು ಠಾಣೆಗಳಲ್ಲಿ ಠಾಣೆಯಲ್ಲಿನ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ನೀಡಿದ ಸೇವೆ ಬಗ್ಗೆ ತಿಳಿಸುವಂತಹ ಫೀಡ್ ಬ್ಯಾಕ್ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಗಳನ್ನ ಅಳವಡಿಸಲಾಗಿದೆ. ಈ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಇಲಾಖೆ ಮುಂದಾದರೆ, ಸಾರ್ವಜನಿಕರು ತಮ್ಮ ಅನುಭವವನ್ನು ಹಂಚಿಕೊಳ್ಳಬಹುದಾಗಿದೆ.
ಇದ್ರಿಂದ ಏನು ಲಾಭ?
ಸದ್ಯ ಎಲ್ಲಾ ಪೊಲೀಸ್ ಠಾಣೆಗಳ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಅನ್ನು ಪ್ರದರ್ಶಿಸಲಾಗಿದ್ದು, ಠಾಣೆಗೆ ಭೇಟಿ ನೀಡುವವರು ಪೊಲೀಸರ ಸೇವೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದಾಗಿದೆ. ಪೊಲೀಸ್ ಠಾಣೆಗೆ ಬರುವ ಜನರು ಅಥವಾ ದೂರುದಾರರು ತಮ್ಮ ಸ್ಮಾರ್ಟ್ ಫೋನ್ಗಳಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಿಬ್ಬಂದಿ ವರ್ತನೆ, ದೂರುಗಳನ್ನು ಸ್ವೀಕರಿಸುವುದು, ಪ್ರತಿಕ್ರಿಯೆ ಮತ್ತು ಇತರ ಸಮಸ್ಯೆಗಳ ಕುರಿತು ಫೀಡ್ ಬ್ಯಾಕ್ ನೀಡಬಹುದು. ಈ ದೂರು, ವಿಮರ್ಶೆ ಅಥವಾ ಕಾಮೆಂಟ್ಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಒಟ್ಟಿನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಿದ್ದು ಜನಸಾಮಾನ್ಯರು ಕೂಡಾ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸೇವೆ ಬಳಸಿಕೊಳ್ಳಬಹುದಾಗಿದೆ.