ರಾಜ್ಯದ ಅಮೂಲ್ಯ ವೃಕ್ಷ ಸಂರಕ್ಷಣೆಗೆ ಬರಲಿದೆ ಜಿಯೋ ಟ್ಯಾಗ್!
– 3 ತಿಂಗಳಲ್ಲಿ ಮರಗಳಿಗೆ ಜಿಯೋಟ್ಯಾಗ್ ಮಾಡಲು ಗಡುವು
– ಏನಿದು ಯೋಜನೆ?…ಮರ ಉಳಿಸಲು ಪ್ಲಾನ್
NAMMUR EXPRESS NEWS
ಬೆಂಗಳೂರು: ಮರಗಳ ಅಕ್ರಮ ಕಡಿತಲೆ ತಡೆಯಲು ಮತ್ತು ಅಮೂಲ್ಯ ವೃಕ್ಷ ಸಂಪತ್ತು ಉಳಿಸಲು ಸಂಕಲ್ಪ ಮಾಡಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಬೀಟೆ, ಶ್ರೀಗಂಧ, ತೇಗದಂತಹ ಅಮೂಲ್ಯ ಮರಗಳ ಜಿಯೋ ಟ್ಯಾಗ್ ಮಾಡಲು ಸೂಚನೆ ನೀಡಿದ್ದಾರೆ. ಕಾಡನಂಚಿನಲ್ಲಿರುವ ಎಲ್ಲ ಜಮೀನಿನಲ್ಲಿ ಅಂದರೆ ಗ್ರಾಮಗಳಿಗೆ ಹೊಂದಿಕೊಂಡ ವನಪ್ರದೇಶ, ಪಟ್ಟಾಭೂಮಿ ಮತ್ತು ಸರ್ಕಾರಿ ಜಮೀನಿನಲ್ಲಿರುವ ಬೀಟೆ (ರೋಸ್ ವುಡ್), ತೇಗ (ಟೀಕ್) ಮತ್ತು ಶ್ರೀಗಂಧ (ರಕ್ತ ಚಂದನ) ಮರಗಳಿಗೆ 3 ತಿಂಗಳ ಅವಧಿಯೊಳಗೆ ಜಿಯೋ ಟ್ಯಾಗ್ ಮಾಡಿ ಇಲಾಖೆಗೆ ವಲಯವಾರು ಪಟ್ಟಿ ಸಲ್ಲಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆ ಬೇಲೂರು ತಾಲೂಕು, ನಂದಗೋಡನಹಳ್ಳಿ ಸಕಲೇಶಪುರದ ಕೌಡಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಇಡಗುಂದಿಯೇ ಮೊದಲಾದ ಕಡೆಗಳಲ್ಲಿ ಅಕ್ರಮವಾಗಿ ನೂರಾರು ಅಮೂಲ್ಯ ಮನ್ನಾ ಜಾತಿಯ ವೃಕ್ಷಗಳನ್ನು ಕಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಶುಂಠಿ ಬೆಳೆಯ ಹೆಸರಲ್ಲಿ ಮರಗಳ ಹನನ ಆಗುತ್ತಿರುವುದನ್ನು ತಪ್ಪಿಸಲು ಶ್ರೀಗಂಧ, ತೇಗ ಮತ್ತು ಬೀಟೆ ಮರಗಳ ಜಿಯೋ ಟ್ಯಾಗ್ ಮಾಡಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಟಿಪ್ಪಣಿಯಲ್ಲಿ ಸೂಚನೆ ನೀಡಿದ್ದಾರೆ. ಅರಣ್ಯದೊಳಗೆ ಬೆಲೆ ಬಾಳುವ ಮರ ಕಡಿದು ಸಾಗಾಟ ಮಾಡಲು ಸಾಧ್ಯವಾಗದಂತೆ ಕಳ್ಳಬೇಟೆ ನಿಗ್ರಹ ತಂಡಗಳನ್ನು ನಿಯೋಜಿಸಲಾಗಿದೆ.
ಆದರೆ ಕಾಡಿನಂಚಿನಲ್ಲಿ ಮತ್ತು ಸರ್ಕಾರಿ ಭೂಮಿಯಲ್ಲಿ ಅರಣ್ಯ ಇಲಾಖೆ ಗುತ್ತಿಗೆ ನೀಡಿರುವ ಎಸ್ಟೇಟ್ ಹಾಗೂ ಪಟ್ಟಾ ಜಮೀನಿನಲ್ಲಿರುವ ಬೆಲೆಬಾಳುವ ವೃಕ್ಷಗಳ ಸಂರಕ್ಷಣೆ ಇಲಾಖೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಜಿಯೋ ಟ್ಯಾಗ್ ಮಾಡಿದರೆ ವೃಕ್ಷ ಸಂರಕ್ಷಣಾ ಕಾಯಿದೆ ಅಡಿ ಪೂರ್ವಾನುಮತಿ ಪಡೆಯದೆ ಮರ ಕಡಿಯಲು ಸಾಧ್ಯವಾಗುವುದಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.