ಏ.1ರಿಂದಲೇ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ
– ಮುಷ್ಕರ ಕೈ ಬಿಟ್ಟ ಆಶಾ ಕಾರ್ಯಕರ್ತೆಯರು
– ಆಶಾ ಕಾರ್ಯಕರ್ತೆಯರ ಜೊತೆ ಸಿಎಂ ಸಂಧಾನ ಯಶಸ್ವಿ
NAMMUR EXPRESS NEWS
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆಶಾ ಕಾರ್ಯಕರ್ತೆಯರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ. ಗೌರವಧನವನ್ನು ಏಪ್ರಿಲ್ ಒಂದರಿಂದಲೇ ಅನ್ವಯವಾಗುವಂತೆ ನೀಡಲು ಸರಕಾರ ಒಪ್ಪಿದೆ. ಹೀಗಾಗಿ, ಫ್ರೀಡಂ ಪಾರ್ಕ್ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಮುಷ್ಕರವನ್ನು ಆಶಾ ಕಾರ್ಯಕರ್ತೆಯರು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ ದಲ್ಲಿ ಶುಕ್ರವಾರ ಸಂಧಾನ ಸಭೆ ಜರುಗಿತು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಂಘಟನೆಯ ಪದಾಧಿಕಾರಿಗಳು ಮತ್ತು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರನ್ನು ಒಳಗೊಂಡ ನಿಯೋಗದ ಚರ್ಚೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರ ಕೆಲವು ಬೇಡಿಕೆಗಳ ಈಡೇರಿಕೆಗೆ ಬಜೆಟ್ನಲ್ಲಿ ಹಣ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು. ರಾಜ್ಯ ಸರಕಾರದಿಂದ ಪ್ರತಿ ಮಾಹೆ 5000 ರೂ. ಹಾಗೂ ಕೇಂದ್ರ ಸರಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ತಿಂಗಳಿಗೆ ನೀಡಲಾಗುವುದು,” ಎಂದು ಸಭೆಯಲ್ಲಿ ಸಿಎಂ ಭರವಸೆ ನೀಡಿದರು.
ಪೋರ್ಟಲ್ ಸುಧಾರಣೆಗೆ ಸೂಚನೆ:
ಮಾಹಿತಿಯನ್ನು ಪೋರ್ಟಲ್ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ, ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.