ಹೊಸ ಇತಿಹಾಸ ಸೃಷ್ಟಿಸಿದ ಕರ್ನಾಟಕ ಹೈಕೋರ್ಟ್
– ಮೊದಲ ಬಾರಿಗೆ ಕನ್ನಡದಲ್ಲೇ ತೀರ್ಪು ಪ್ರಕಟ
– ಹಲವು ವರ್ಷಗಳ ಬೇಡಿಕೆಗೆ ಕಡೆಗೂ ಸ್ಪಂದನೆ
– ಭಾರತ ಭಾಷಾ ದಿನದ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಕೇಳಿ ಬಂದ ಕನ್ನಡ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ಪ್ರಕಟಿಸುವ ಮೂಲಕ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠ ಗುರುವಾರ(ಡಿ.12) ಹೊಸ ಇತಿಹಾಸ ದಾಖಲಿಸಿದೆ. ಭಾರತ ಭಾಷಾ ದಿನ(ಡಿ.11)ದ ಹಿನ್ನೆಲೆಯಲ್ಲಿ ಹೈಕೋರ್ಟ್ ಕನ್ನಡದಲ್ಲಿ ತೀರ್ಪು ಪ್ರಕಟಿಸಿತು. ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಅವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿಗಳು ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಬರೆದರು. ತೀರ್ಪಿನ ಆಪರೇಟಿವ್ ಭಾಗವನ್ನು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರು ಕನ್ನಡದಲ್ಲಿ ಓದಿದರು. ಬಳಿಕ ‘ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು’ ಎಂದು ಹೇಳಿದರು.
ಭಾರತ ಭಾಷಾ ದಿನವಾದ ಹಿನ್ನೆಲೆಯಲ್ಲಿ ಇಂದು (ಡಿ.12) ಕನ್ನಡದಲ್ಲಿ ಆದೇಶ ನೀಡುತ್ತಿದ್ದೇವೆ. ಭಾರತದ ಭಾಷೆಗಳಿಗೆ ಮಾನ್ಯತೆ ನೀಡುವುದೇ ‘ಭಾರತ ಭಾಷಾ’ ದಿನದ ಉದ್ದೇಶ. ಪ್ರಕರಣಕ್ಕೆ ಸಂಬಂಧಿಸಿ ತರ್ಜುಮೆ ಮಾಡದೆ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ನಾವೇ ಎರಡು ಆದೇಶ ಬರೆದಿದ್ದೇವೆ. ನಾವು ಹೊಸ ಟ್ರೆಂಡ್ ಸೆಟ್ ಮಾಡಲು ನಿರ್ಧರಿಸಿದ್ದೇವೆ. ಪ್ರಸ್ತುತ ತೀರ್ಪುಗಳನ್ನು ಇಂಗ್ಲೀಷ್ನಲ್ಲಿ ನೀಡುತ್ತಿದ್ದೇವೆ. ಹೀಗಾದರೆ ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ?” ಇಂಗ್ಲೆಂಡ್ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು. ಹೀಗಾಗಿ ಇಂಗ್ಲೆಂಡ್ ನ್ಯಾಯಾಲಯದ ಆದೇಶ/ತೀರ್ಪು ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಶಾಸನ ರೂಪಿಸಿದ್ದರು. ಅಂದಿನಿಂದ ಇಂದಿನವರೆಗೆ ಇಂಗ್ಲೀಷ್ ಭಾಷೆಯಲ್ಲಿಯೇ ಕಲಾಪ ನಡೆಯುತ್ತಿದೆ. ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ನ್ಯಾ. ಕೃಷ್ಣ ದೀಕ್ಷಿತ್ ಅವರು ವಿವರಿಸಿದರು. ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರು ”ಸುಪ್ರೀಂ ಕೋರ್ಟ್ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವ ಸಲುವಾಗಿ ತೀರ್ಪುಗಳನ್ನು ಅನುವಾದ ಮಾಡಬೇಕೆಂದು ಹೇಳಿದೆ. ಸುಪ್ರೀಂ ಕೋರ್ಟ್ನ 2,400 ತೀರ್ಪುಗಳು ಸದ್ಯ ಕನ್ನಡಕ್ಕೆ ಅನುವಾದಗೊಂಡಿದ್ದು, ಲಭ್ಯ ಇವೆ. ಹೈಕೋರ್ಟ್ನ 1,400 ತೀರ್ಪುಗಳು ಕನ್ನಡಕ್ಕೆ ಅನುವಾದವಾಗಿವೆ” ಎಂದು ತಿಳಿಸಿದರು.