50 ಹುಡುಗಿಯರ ಖಾಸಗಿ ಅಂಗಾಂಗ ಶೂಟ್: ವ್ಯಕ್ತಿ ಮೆಟ್ರೋದಲ್ಲಿ ಸೆರೆ!
– ಬೆಂಗಳೂರು : ಮೆಟ್ರೋದಲ್ಲಿ ಯುವತಿಯರ ಅಂಗಾಂಗ ವಿಡಿಯೋ ಮಾಡುತ್ತಿದ್ದ ಆರೋಪಿ ಪೊಲೀಸ್ ವಶಕ್ಕೆ
– ಹಾಸನ: ಮದುವೆಯಾಗಲು ನಿರಾಕರಣೆ ಮಾಡಿದ್ದಕ್ಕೆ ಪ್ರಿಯಕರನಿಗೆ ಚೂರಿ ಇರಿದ ಪ್ರೇಯಸಿ
– ಹಾಸನ: ಹೊಸ ವರ್ಷದ ಆಚರಣೆ ಪಾರ್ಟಿ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು
– ಉಳ್ಳಾಲ : ಆಯತಪ್ಪಿ ಬಾವಿಗೆ ಬಿದ್ದು ಮೀನುಗಾರ ಸಾವು
NAMMUR EXPRESS NEWS
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರ ಅಂಗಾಂಗಗಳ ವಿಡಿಯೋ ಹಾಗೂ ಫೋಟೋ ತೆಗೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ವಶಕ್ಕೆ ಪಡೆಯಲಾದ ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಅವನಿಗೆ ಬಿಎಂಆರ್ಸಿಎಲ್ 5,000 ರೂ. ದಂಡ ವಿಧಿಸಿದೆ. ಆರೋಪಿಯು ಮೆಟ್ರೋದಲ್ಲಿ ಪ್ರಯಾಣ ಮಾಡುವ ಮಹಿಳೆಯರ ಖಾಸಗಿ ಅಂಗಾಂಗಗಳ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ. ಆರೋಪಿಯ ಮೊಬೈಲ್ನಲ್ಲಿ ಸುಮಾರು 50 ಯುವತಿಯರ ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ.
– ಹಾಸನ: ಮದುವೆಯಾಗಲು ನಿರಾಕರಣೆ ಮಾಡಿದ್ದಕ್ಕೆ ಪ್ರಿಯಕರನಿಗೆ ಚೂರಿ ಇರಿದ ಪ್ರೇಯಸಿ
ಹಾಸನ: ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಪ್ರೇಯಸಿಯೊಬ್ಬಳು ಚೂರಿ ಇರಿದಿರುವ ಘಟನೆ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಗೇಟ್ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹಾಸನ ತಾಲೂಕಿನ ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (24) ಗಾಯಗೊಂಡ ಯುವಕನಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಭವಾನಿ ಎಂಬ ಯುವತಿ ಮನುಕುಮಾರ್ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇಬ್ಬರಲ್ಲಿ ಪ್ರೀತಿ ಪ್ರೇಮ ಶುರುವಾಗಿದೆ. ಆದರೆ, ಕೆಲವು ದಿನಗಳಿಂದ ಇಬ್ಬರೂ ಬೇರೆಯಾಗಿದ್ದರು. ಯಾವ ಕರೆ ಕೂಡ ಮಾಡಿರಲಿಲ್ಲ. ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೊಟೇಲ್ಗೆ ಬಂದಿದ್ದ ಮನುಕುಮಾರ್ ವಿಚಾರ ತಿಳಿದ ಯುವತಿ, ಆತನಿಗೆ ಫೋನ್ ಮಾಡಿದ್ದಾಳೆ. ಆದರೆ, ಮನುಕುಮಾರ್ ಫೋನ್ ತೆಗೆದಿಲ್ಲ. ಬಳಿಕ ತಡರಾತ್ರಿ ಹೊಟೇಲ್ ಬಳಿ ಬಂದ ಭವಾನಿ ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾಳೆ. ಇದೇ ವೇಳೆ ಮನುಕುಮಾರ್ ಕೂಡ ಗೇಟ್ ಬಳಿ ಬಂದಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ತಕ್ಷಣ ಜಗಳ ಬಿಡಿಸಲು ಸ್ನೇಹಿತರು ಮುಂದಾಗಿದ್ದರು. ಈ ವೇಳೆ ಯುವತಿ ಮನುಕುಮಾರ್ಗೆ ಚಾರಿಯಿಂದ ಇರಿದಿದ್ದಾಳೆ. ತಕ್ಷಣ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
– ಹಾಸನ: ಹೊಸ ವರ್ಷದ ಆಚರಣೆ ಪಾರ್ಟಿ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಹೊಸ ವರ್ಷದ ಆಚರಣೆ ಮಾಡುವ ವೇಳೆ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನದ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬೇಲೂರು ತಾಲೂಕಿನ ಮಲಸಾವರ ಗ್ರಾಮದ ಲಕ್ಷ್ಮಿಪುರ ಬಡಾವಣೆಯ ನಿವಾಸಿಗಳಾದ ಅಜಿತ್ (30 ) ಹಾಗೂ ಅಶೋಕ್ (35) ಗುರುತಿಸಲಾಗಿದೆ. ಹೊಸ ವರ್ಷದ ಆಚರಣೆಗೆ ಬೇಲೂರಿನ ಮಲಸಾವರ ಗ್ರಾಮದ ಲಕ್ಷ್ಮಿಪುರ ಕೆರೆ ಏರಿಯ ಮೇಲೆ ಯುವಕರು ಪಾರ್ಟಿ ಮಾಡಿದ್ದಾರೆ. ಆದರೆ, ಬುಧವಾರ ಬೆಳಗ್ಗೆಯಾದರೂ ಮನೆಗೆ ಯುವಕರು ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯ ಏರಿಯ ಮೇಲೆ ವಾಹನ, ಚಪ್ಪಲಿಗಳು ಕಂಡು ಬಂದಿವೆ. ಈ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ, ಕೆರೆಯಲ್ಲಿ ಶೋಧಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆ ಬಗ್ಗೆ ಅರೇಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
– ಉಳ್ಳಾಲ : ಆಯತಪ್ಪಿ ಬಾವಿಗೆ ಬಿದ್ದು ಮೀನುಗಾರ ಸಾವು
ಉಳ್ಳಾಲ: ಪಾಳು ಬಾವಿಗೆ ಮೀನುಗಾರರೋರ್ವರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಉಚ್ಚಿಲ ಬೀಚ್ ಬಳಿ ನಡೆದಿದೆ. ಉಚ್ಚಿಲ ನಿವಾಸಿ ಶಶೀಂದ್ರ ಎಂ. ಉಚ್ಚಿಲ್ (75)ಮೃತಪಟ್ಟ ಮೀನುಗಾರ. ಶಶೀಂದ್ರ ಎಂ. ಉಚ್ಚಿಲ್ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ವಾಸ್ಕೋ ರೆಸಾರ್ಟ್ ಮುಂಭಾಗದ ಪಾಳುಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಶಶೀಂದ್ರ ಅವರು ಆಯತಪ್ಪಿ ಬಾವಿಯೊಳಗೆ ತಲೆಕೆಳಗಾಗಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಕೇವಲ ಮೂರು ಅಡಿಯಷ್ಟು ನೀರಿದ್ದ ಪರಿಣಾಮ ತಲೆಗೆ ನೆಲ ಬಡಿದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ತಕ್ಷಣ ಸ್ಥಳೀಯರ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಶಶೀಂದ್ರ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವ ತಯಾರಿ ನಡೆದಿತ್ತು ಎಂದು ತಿಳಿದುಬಂದಿದೆ.