ಮಲೆನಾಡತ್ತ ನಕ್ಸಲರ ಹೆಜ್ಜೆ!
– ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು?
– ಕರಾವಳಿಯಿಂದ ಮಲೆನಾಡ ಕಡೆ ನಕ್ಸಲರ ಪಯಣ?: ಎಲ್ಲೆಡೆ ಅಲರ್ಟ್
– ಸಿಕ್ಕಿಬೀಳುವರೋ….? ಶರಣಾಗತಿಯಾಗುವರೋ…?
NAMMUR EXPRESS NEWS
ಉಡುಪಿ/ ಶಿವಮೊಗ್ಗ/ ಚಿಕ್ಕಮಗಳೂರು: ನಕ್ಸಲ್ ನಾಯಕ ವಿಕ್ರಂ ಗೌಡ ಸಾವಿನ ಬಳಿಕ ಈಗ ಉಳಿದ ನಕ್ಸಲರ ಮೇಲೆ ಪೊಲೀಸ್ ಇಲಾಖೆ ಕಣ್ಣು ಇಟ್ಟಿದೆ. ಈಗಾಗಲೇ ಹೆಬ್ರಿಯಲ್ಲಿ ನಡೆದ ನಕ್ಸಲ್ ಎನ್ಕೌಂಟರ್ ಅಲ್ಲಿ ವಿಕ್ರಂ ಗೌಡ ಬಲಿಯಾಗಿದ್ದಾನೆ. ಇನ್ನಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದೀಗ ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆ ಉಳಿದಿರುವುದು ಎಂಟು ಮಂದಿ ನಕ್ಸಲರು ಮಾತ್ರ, ಅವರಲ್ಲಿ ಏಳು ಜನ ಈಗ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದ್ದಾರೆ ಎಂದು ಮೂಲಗಳು ಹೇಳುತ್ತವೆ. ಇದೀಗ ಮಲೆನಾಡ ಕಡೆ ನಕ್ಸಲರು ಪಯಣ ಬೆಳೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಎಲ್ಲೆಡೆ ಅಲರ್ಟ್ ಆಗಿದ್ದಾರೆ.
ಕೇರಳದ ನಕ್ಸಲ್ ನಾಯಕ ಸಂಜೊಯ್ ದೀಪಕ್, ಮೊಹಿಯುದ್ದೀನ್ ಸೇರಿ ಬಹುತೇಕರ ಬಂಧನವಾಗಿದೆ. ಅಲ್ಲಿ ಉಳಿದಿರುವುದು ಸಂತೋಷ್ ಮಾತ್ರ. ರಾಷ್ಟ್ರ ಮಟ್ಟದ ನಕ್ಸಲ್ ನಾಯಕರೊಂದಿಗೆ ಸಂಜೊಯ್ ದೀಪಕ್ ಸಂಪರ್ಕ ಹೊಂದಿದ್ದ. ಇವರ ಬಂಧನದ ಬಳಿಕ ಎಲ್ಲವೂ ಕಡಿತಗೊಂಡಿತು. ವಯೋಸಹಜ ಅನಾರೋಗ್ಯವೂ ಉಳಿದವರನ್ನು ಕಾಡುತ್ತಿದೆ.
ಕೇರಳದಲ್ಲಿ ಮುಂದುವರಿಯಲು ಯಾವುದೇ ಅವಕಾಶ ಇಲ್ಲದ್ದರಿಂದ 8 ಜನರ ತಂಡ ಕರ್ನಾಟಕದತ್ತ ಹೊರಟಿತು. ತಂಡದಲ್ಲಿ ಮುಂಡಗಾರು ಲತಾ, ಜಯಣ್ಣ (ಜಾನ್), ವನಜಾಕ್ಷಿ, ಸುಂದರಿ, ದಿಶಾ (ಕೇರಳ), ಕೋಟೆವುಂಡ ರವಿ, ರಮೇಶ್ (ತಮಿಳುನಾಡು), ವಿಕ್ರಂ ಗೌಡ ಸೇರಿ ಎಂಟು ಜನ ಇದ್ದರು. ಸಂತೋಷ್ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ಸಿಕ್ಕಿಬೀಳುವರೋ, ಶರಣಾಗತಿಯಾಗುವರೋ?
ಹತನಾದ ವಿಕ್ರಂ ಗೌಡ ಮಾತ್ರ ಶರಣಾಗತಿಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದರು. ಇನ್ನುಳಿದಂತೆ ಇತರ ನಕ್ಸಲ್ ಸದಸ್ಯರು ಶರಣಾಗತಿ ಬಯಸಿದ್ದರು ಎನ್ನುವ ಮಾತು ಕೇಳಿಬರುತಿದ್ದು, ಪರಾರಿಯಾದ ಎಲ್ಲ ನಕ್ಸಲರು ಸದ್ಯದಲ್ಲೇ ಸಿಕ್ಕಿಬೀಳುವ ಸಾಧ್ಯತೆ ಅಥವಾ ತಾವಾಗಿಯೇ ಶರಣಾಗುವ ಸಂಭವವೇ ಹೆಚ್ಚು ಎಂದು ಸೂಚಿಸಿದ್ದಾರೆ .