ಕರ್ನಾಟಕ ಟಾಪ್ 3 ನ್ಯೂಸ್
ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವ ಸಂಭ್ರಮ!
– ರಾಜ್ಯೋತ್ಸವ ಅದ್ದೂರಿ ಆಚರಣೆ: ಸಿಎಂ ಸಿದ್ದರಾಮಯ್ಯ ಸೂಚನೆ
– ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ!
ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸಂಪೂರ್ಣ ಸ್ಥಗಿತ!
– ಅಕ್ಟೋಬರ್ 4ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಜ್ಜು!
ತಿರುಪತಿ ಲಡ್ಡಿನಲ್ಲೂ ಗೋಲ್ ಮಾಲ್?
– ತಿರುಪತಿ ಲಡ್ಡಿನಲ್ಲಿ ಕೊಬ್ಬು, ಎಣ್ಣೆ ಮಿಶ್ರಣ: ಲ್ಯಾಬ್ ರಿಪೋರ್ಟ್ನಲ್ಲಿ ದೃಢ
NAMMUR EXPRESS NEWS
ಬೆಂಗಳೂರು : ರಾಜ್ಯದ ಶಾಲಾ- ಕಾಲೇಜುಗಳಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ – 2024ರ ಪ್ರದಾನ ಸಮಾರಂಭ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪದ ಪೂರ್ವಭಾವಿ ಸಭೆಗೆ ಆಗಮಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ನಾಡಿನ ಕಲೆ, ಸಾಹಿತ್ಯ, ಕೃಷಿ, ತೋಟಗಾರಿಕೆ, ಕೈಗಾರಿಕೆ ಕುರಿತಾದ 5 ಸಂಪುಟಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಭ್ರಮದ ಸಂಪುಟ ಹೊರತರಲಾಗುತ್ತಿದೆ.ಕನ್ನಡದ ಸಾಹಿತಿಗಳ ನುಡಿಮುತ್ತುಗಳನ್ನು ಎಲ್ಲಾ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಕಟಿಸಬೇಕು.ಎಲ್ಲ ಶಾಲಾ ಕಾಲೇಜುಗಳಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಕ್ರಮಕೈಗೊಳ್ಳಬೇಕು.
ಕನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಕನ್ನಡದ ಅರಿವು ವಿಸ್ತರಿಸಿದ ಮಾದರಿಗಳು, ಹೋರಾಟದ ಹಾದಿಯಲ್ಲಿ ರೂಪುಗೊಂಡ ಕನ್ನಡ ಚರಿತ್ರೆಯನ್ನು ಇವತ್ತಿನ ಕನ್ನಡ ಯುವಜನ ಸಮೂಹಕ್ಕೆ ತಲುಪಿಸಲು ಕ್ರಮ ವಹಿಸಬೇಕು. ಕನ್ನಡ ಭಾಷೆ – ಸಂಸ್ಕೃತಿ – ಸಂಗೀತ ಸಾಹಿತ್ಯ – ಜನಪದ -ಚರಿತ್ರೆ ಎಲ್ಲದರ ಮಹತ್ವ ಸಾರುವ ಕಾರ್ಯಕ್ರಮದ ಆಯೋಜನೆಯಾಗಬೇಕು ಎಂದು ಹೇಳಿದ್ದಾರೆ.
* ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ
ರಾಜ್ಯೋತ್ಸವ ಪ್ರಶಸ್ತಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರೆ, ಸೆಪ್ಟೆಂಬರ್ 30ರ ವರೆಗೆ ಅರ್ಜಿ ಸಲ್ಲಿಸಬಹುದು. 69 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ನಡೆಯುತ್ತಿದ್ದು, ಹಂಪಿಯಿಂದ ಆರಂಭವಾದ ಕನ್ನಡ ರಥ ಯಾತ್ರೆಗೆ 28 ಜಿಲ್ಲೆಗಳಲ್ಲಿ ಸಾಗಿದ್ದು, ರಥಯಾತ್ರೆ ಸಮಾರೋಪ ಸಮಾರಂಭ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರದಲ್ಲಿ, ಕರ್ನಾಟಕ ಸುವರ್ಣ ಸಂಭ್ರಮ -50 ಸಮಾರೋಪ ಸಮಾರಂಭ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದೆ.ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಹ ಇದೇ ಸಂದರ್ಭದಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆ ಸಂಪೂರ್ಣ ಸ್ಥಗಿತ!?
ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಸೇವೆಗಳಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 4 ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ನಿರ್ಧರಿಸಿದೆ.
ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆಗಳನ್ನು ನಿಲ್ಲಿಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಆರ್ಡಿಪಿಆರ್ ಇಲಾಖೆಯ ಸುಮಾರು 11 ವೃಂದಗಳು ಸೇರಿ ಬೃಹತ್ ಹೋರಾಟ ನಡೆಸಲಿದ್ದಾರೆ. ಅಧಿಕಾರಿಗಳು ಹಾಗೂ ನೌಕರರ ಸಮಸ್ಯೆಗಳನ್ನು ಸೆಪ್ಟೆಂಬರ್ 30ರೊಳಗೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಅಕ್ಟೋಬರ್ 4 ರಿಂದ ಅನಿರ್ದಿಷ್ಟಾವಧಿ ಹೋರಾಟ ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಹಾಗೂ ಇಲಾಖೆಯ ಸಚಿವರು ಈ ಬಗ್ಗೆ ಸ್ಪಂದಿಸದಿದ್ದಲ್ಲಿ ತೀವ್ರ ಹೋರಾಟ ಮಾಡಲಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಗಳು, ಪಂಚಾಯಿತಿ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ಜವಾನರು, ಸ್ವಚ್ಛತಾಗಾರರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಒಕ್ಕೂಟ ಈ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ತಿರುಪತಿ ಲಡ್ಡಿನಲ್ಲೂ ಗೋಲ್ ಮಾಲ್?
ತಿರುಪತಿ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸಲು ಕೊಬ್ಬು, ಎಣ್ಣೆ ಮತ್ತು ತಾಳೆ ಎಣ್ಣೆಯನ್ನು ಬಳಸಲಾಗುತ್ತಿತ್ತು ಎನ್ನುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಲ್ಯಾಬ್ ರಿಪೋರ್ಟ್ನಲ್ಲೂ ಈ ಅಂಶ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತಾದ ದಾಖಲೆಯನ್ನೂ ಕೂಡ ಬಹಿರಂಗ ಮಾಡಿವೆ.
ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೆ.18ರಂದು ಆರೋಪ ಮಾಡಿದ್ದರು.ಇದರ ನಡುವೆಯೇ ಆಘಾತಕಾರಿ ಟೆಸ್ಟ್ ರಿಪೋರ್ಟ್ ಸಂಚಲನ ಸೃಷ್ಟಿಸಿದೆ. ಆದರೆ, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿ ಪಕ್ಷ ಆರೋಪವನ್ನು ನಿರಾಕರಿಸಿದೆ.