ಅರ್ಧಕ್ಕೆ ಕುಸಿದ ಚಿಕನ್ ದರ..!
– ಶಬರಿಮಲೆ ಸೀಸನ್ ಹಿನ್ನೆಲೆ ಚಿಕನ್ ಬೇಡಿಕೆ ಕುಸಿತ
– ಸಂಕಷ್ಟದಲ್ಲಿ ವ್ಯಾಪಾರಿಗಳು: ಎಷ್ಟಿದೆ ದರ..?
NAMMUR EXPRESS NEWS
ಶಬರಿಮಲೆ ಸೀಸನ್ ಆರಂಭವಾದ ಹಿನ್ನೆಲೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಒಮ್ಮೆಲೇ ಅರ್ಧಕ್ಕೆ ಕುಸಿದ ಚಿಕನ್ ದರದಿಂದ ವ್ಯಾಪಾರಿಗಳು ಕಂಗಲಾಗಿದ್ದಾರೆ. ಈ ತನಕ ಕೆಜಿಗೆ 130 ರೂ.ವರೆಗೆ ಇದ್ದ ಬಾಯ್ಲರ್ ಚಿಕನ್ ಏಕಾಏಕಿ 80 ರೂ.ಗೆ ಕುಸಿದಿದೆ. ಶಬರಿಮಲೆ ಸೀಸನ್ ಆರಂಭವಾದ ಬಳಿಕ ಏಕಾಏಕಿ ಚಿಕನ್ ಬೇಡಿಕೆ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು. ಸಂಕಷ್ಟದಲ್ಲಿ ರೈತರು: ಕೋಳಿ ದರ ಕುಸಿತದಿಂದ ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಸೀಸನ್ನಲ್ಲಿ 160 ರೂ.ವರೆಗೆ ಇದ್ದ ಕೋಳಿ ಮಾಂಸದ ದರ 80 ರೂ.ಗೆ ಇಳಿದಿದೆ. ಆದರೆ ಪ್ರಸ್ತುತ ಕೋಳಿ ಉತ್ಪಾದನಾ ವೆಚ್ಚ ಕೆಜಿಗೆ 105 ರೂ.ಗಳಾಗಿದ್ದರೆ, ಚಿಲ್ಲರೆ ದರ ಹಲವೆಡೆ 80ರಿಂದ 90 ರೂ. ಇದೆ. ಆದರೆ ರೈತನಿಗೆ ಕೇವಲ 58ರಿಂದ 60 ರೂ. ಮಾತ್ರ ಸಿಗುತ್ತದೆ. ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಇದರ ಲಾಭ ಪಡೆಯುತ್ತಿದ್ದಾರೆ.
ಮಧ್ಯವರ್ತಿಗಳು ಕೆಜಿಗೆ 10ರಿಂದ 12 ರೂ., ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 20ರಿಂದ 25 ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಆದರೆ ಕೋಳಿ ಸಾಕಣೆಗೆ ಭಾರೀ ವೆಚ್ಚ ತಗಲುತ್ತಿದೆ. 40 ದಿನಗಳ ಕಾಲ ಕೋಳಿಗೆ ಆಹಾರಕ್ಕಾಗಿ ಅದರ ಕೆಲಸಕ್ಕಾಗಿ ಅಧಿಕ ವೆಚ್ಚ ತಗಲುತ್ತಿದೆ. ಮುಂಬರುವ ದಿನಗಳಲ್ಲಿ ಕ್ರಿಸ್ಮಸ್, ಹೊಸ ವರ್ಷಗಳ ಆಚರಣೆಯಿಂದ ಮತ್ತೆ ವ್ಯಾಪಾರ ಸುಧಾರಿಸುತ್ತದೆ ಎಂಬ ಭರವಸೆಯಲ್ಲಿ ವ್ಯಾಪಾರಿಗಳಿದ್ದಾರೆ.