ಟಾಪ್ 3 ನ್ಯೂಸ್
– ಹುಬ್ಬಳ್ಳಿ: ಸಿಲಿಂಡರ್ ಸ್ಫೋಟದಿಂದ 6 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸಾವು..!
– ಕಾಸರಗೋಡು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತ್ಯು!
– ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ.
NAMMUR EXPRESS NEWS
ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳುಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 6 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮತ್ತು ಮಂಜು ವಾಗ್ಮೋಡೆ (22) ಮೃತ ದುರ್ದೈವಿಗಳು. ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಮೃತರಾದ ನಿಜಲಿಂಗಪ್ಪ ಬೇಪುರಿಯ ದೇಹ ಶೇ.86 ರಷ್ಟು, ಸಂಜಯ್ ಸವದತ್ತಿಯ ದೇಹ ಶೇ.80 ರಷ್ಟು, ರಾಜು ಮೂಗೇರಿಯ ದೇಹ ಶೇ.74 ರಷ್ಟು, ಲಿಂಗಾರಾಜು ಬೀರನೂರ ದೇಹ ಶೇ.86 ರಷ್ಟು, ಶಂಕರ್ ಚವ್ಹಾಣ್ ದೇಹ ಶೇ.99 ರಷ್ಟು ಮತ್ತು ಮಂಜು ವಾಗ್ಮೋಡೆ ದೇಹ ಶೇ.70 ರಷ್ಟು ಸುಟ್ಟಿತ್ತು. ಇನ್ನೂ ಚಿಂತಾಜನಕ ಸ್ಥಿತಿಯಲ್ಲಿರುವ ಪ್ರಕಾಶ್ ಬಾರಕೇರ್ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆಯ ದೇಹ ಶೇ74 ರಷ್ಟು ಸುಟ್ಟಿದೆ. ವಿನಾಯಕ್ ಭಾರಕೇರ್ ದೇಹ ಶೇ25 ರಷ್ಟು ಸುಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯಲ್ಲಿ ಡಿಸೆಂಬರ್ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿತ್ತು. ಇವರಲ್ಲಿ 6 ಜನರು ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೆ ಗುರುವಾರ ರಂದು ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ ಮೃತಪಟ್ಟಿದ್ದರು. ಶುಕ್ರವಾರ (ಡಿ.27) ರಂದು ರಾಜು ಮೂಗೇರಿ ಮತ್ತು ಲಿಂಗರಾಜ ಬೀರನೂರ ಸಾವಿಗೀಡಾಗಿದ್ದರು.ಡಿ.29 ಶಂಕರ್ ಚವ್ಹಾಣ್ ಮತ್ತು ಮಂಜು ವಾಗ್ಮೋಡೆ ಮೃತಪಟ್ಟಿದ್ದಾರೆ. ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದಲ್ಲದೇ, ಕಿಮ್ಸ್ ವೈದ್ಯರು ರಾಜ್ಯ ಮತ್ತು ದೇಶದ ವಿವಿಧ ಭಾಗದ ತಜ್ಞ ವೈದ್ಯರಿಂದ ಮಾಹಿತಿ ಪಡೆದುಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಮಾಲಾಧಾರಿಗಳಿಗೆ ಶೇ70 ಕ್ಕಿಂತ ಹೆಚ್ಚು ಸುಟ್ಟ ಗಾಯವಾದ ಕಾರಣ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. 9 ಜನ ಮೂಲಾಧಾರಿಗಳ ಪೈಕಿ 12 ವರ್ಷದ ವಿನಾಯಕ್ ಬಾರಕೇರ ಮಾತ್ರ ಚಿಕಿತ್ಸೆಗೆ ಸ್ಪಂದಿಸಿದ್ದಾನೆ. ಹೀಗಾಗಿ, ಬಾಲಕನನ್ನು ಐಸೋಲೇಶನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
– ಕಾಸರಗೋಡು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತ್ಯು!
ಕಾಸರಗೋಡು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಎರಿಂಜಿಪುಳ ಪಯಸ್ವಿನಿ ನದಿಯಲ್ಲಿ ನಡೆದಿದೆ. ಮೃತರನ್ನು ಸಿದ್ದೀಕ್ ಅವರ ಪುತ್ರ ರಿಯಾಜ್ (17), ಅಶ್ರಫ್ ಅವರ ಪುತ್ರ ಯಾಸೀನ್ (13) ಮತ್ತು ಮಜೀದ್ ಅವರ ಪುತ್ರ ಸಮದ್ (13) ಎಂದು ಗುರುತಿಸಲಾಗಿದೆ. ಮೃತ ಮೂವರೂ ಅವರ ಸಹೋದರರ ಮಕ್ಕಳಾಗಿದ್ದಾರೆ. ಮಂಜೇಶ್ವರದಲ್ಲಿ ಪ್ಲಸ್ ಒನ್ ಓದುತ್ತಿರುವ ರಿಯಾಝ್ ಶುಕ್ರವಾರ ಎರಿಂಜಿಪುಳ ಬಳಿಯ ತನ್ನ ಪೂರ್ವಜರ ಮನೆಗೆ ಬಂದಿದ್ದು. ಮೂವರು ಮಕ್ಕಳು ಮಧ್ಯಾಹ್ನ ತಮ್ಮ ಮನೆಯ ಸಮೀಪ ಇರುವ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಕಾಸರಗೋಡು ಮತ್ತು ಕುಟ್ಟಿಕೋಲ್ ನ ಅಗ್ನಿಶಾಮಕ ಮತ್ತು ಸ್ಕೂಬಾ ತಂಡಗಳ ಶೋಧಕಾರ್ಯದಿಂದ ಮೂವರ ಬಾಲಕರ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಚೆರ್ಕಳ ಕೆ.ಕೆ.ಪುರಂ ಹೊರವಲಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
– ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ
ಮಂಡ್ಯ : ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ. ರಾಮಚಂದ್ರು (21) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ರಾಮಚಂದ್ರು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲೆಟಿನ್ ಸ್ಫೋಟಕ್ಕೆ ಯುವಕನ ಹೊಟ್ಟೆಯ ಭಾಗ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಂದು ವರ್ಷದ ಹಿಂದೆ ಅಪ್ರಾಪ್ತೆ ಕರೆದೊಯ್ದ ಹಿನ್ನೆಲೆಯಲ್ಲಿ ರಾಮಚಂದ್ರು ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಫೋಕ್ಸೋ ಕೇಸ್ನಲ್ಲಿ 6 ತಿಂಗಳು ಜೈಲುವಾಸ ಅನುಭವಿಸಿದ್ದ. ಬಳಿಕ 2 ಕುಟುಂಬಗಳ ರಾಜಿ ಸಂಧಾನ ಬಳಿಕ ಕೇಸ್ ವಾಪಾಸ್ ಪಡೆಯಲಾಗಿತ್ತು. ನಂತರ ಅಪ್ರಾಪ್ತ ಪ್ರಿಯತಮೆ ರಾಮಚಂದ್ರನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಮನನೊಂದ ರಾಮಚಂದ್ರ ನಿನ್ನೆ ಆಕೆಯ ಮುನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲ್ಲುಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಪೋಟಿಸಿಕೊಂಡು ಸೂಸೈಡ್ ಮಾಡಿಕೊಂಡಿದ್ದು, ಸ್ಪೋಟಕದ ಬಗ್ಗೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ದೌಡಾಯಿಸಿ ಸ್ಫೋಟಕ್ಕೆ ಬಳಸಿರುವ ವಸ್ತು ಹಾಗೂ ತೀವ್ರತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.