ಟಾಪ್ 3 ನ್ಯೂಸ್
– ಹುಬ್ಬಳ್ಳಿ : ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು
– ಹಾಸನ: ಪತ್ನಿಯು ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ
– ಕಲಬುರಗಿ: ಅತ್ತೆ ಬೇಗ ಸಾಯುವಂತೆ ಮಾಡು ಎಂದು 20 ರೂ ನೋಟಿನಲ್ಲಿ ದೇವರಿಗೆ ವಿಚಿತ್ರ ಕೋರಿಕೆ.
NAMMUR EXPRESS NEWS
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಗ್ನಿ ಅವಘಡದಿಂದ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇದರೊಂದಿಗೆ, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಪ್ರಕಾಶ ಬಾರಕೇರ (42) ಮೃತ ಮೃತ ಅಯ್ಯಪ್ಪ ಮಾಲಾಧಾರಿ. ಸೋಮವಾರ ರಾತ್ರಿಯಷ್ಟೇ ಅಯ್ಯಪ್ಪ ಮಾಲಾಧಾರಿ ತೇಜಸ್ವರ್ (27) ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಪ್ರಕಾಶ್ ಬಾರಕೇರ ಅವರ ಮಗ ವಿನಾಯಕ್ ಕಿಮ್ಸ್ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.
– ಹಾಸನ: ಪತ್ನಿಯು ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ
ಹಾಸನ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಲೆಗೈದ ಘಟನೆ ಅರಸೀಕೆರೆಯ ಹೊರ ವಲಯದ ತಿರುಪತಿ ಕ್ರಾಸ್ ಬಳಿ ನಡೆದಿದೆ. ಮುಜಾಮಿಲ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಯಾಸೀನ್ ಕೊಲೆಗೈದ ಆರೋಪಿಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಮುಜಾಮಿಲ್ ಅಡ್ಡಿಯಾಗಿದ್ದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಕೊಲೆಯಾದ ಮುಜಾಮಿಲ್ನ ಪತ್ನಿ ಜೊತೆ ಯಾಸೀನ್ ಅಕ್ರಮ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಪತ್ನಿ ಜೊತೆ ಮುಜಾಮಿಲ್ ಜಗಳವಾಡುತ್ತಿದ್ದ. ಇದರಿಂದ ಆತನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಹಾಗೂ ಯಾಸೀನ್ ಡಿ.15ರಂದು ಮದ್ಯ ಸೇವಿಸಿದ್ದ ಮುಜಾಮಿಲ್ನನ್ನು ನಗರದ ಹೊರ ವಲಯಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದರು. ಬಳಿಕ ಶವವನ್ನು ಚರಂಡಿಗೆ ಹಾಕಿ ಮೂರು ದಿನಗಳ ಕಾಲ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅಲ್ಲದೆ, ಹೊಗೆ ಬರದಂತೆ ಗುಜರಿ ಅಂಗಡಿಯಿಂದ ಕಬ್ಬಿಣದ ವಸ್ತುಗಳನ್ನು ತಂದು ಚರಂಡಿ ಮುಚ್ಚಿದ್ದರು. ಎರಡು ದಿನಗಳ ನಂತರ ಆರೋಪಿ ಮಹಿಳೆ ಹಾಗೂ ಆಕೆಯ ಪುತ್ರ ಜಾಹೀದ್ ಖಾನ್ ಪೊಲೀಸ್ ಠಾಣೆಗೆ ತೆರಳಿ ಮುಜಾಮಿಲ್ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಸುಟ್ಟ ಸ್ಥಿತಿಯಲ್ಲಿದ್ದ ಮುಜಾಮಿಲ್ ಶವವನ್ನು ಪತ್ತೆ ಹಚ್ಚಿದ್ದರು. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಈ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
– ಕಲಬುರಗಿ: ಅತ್ತೆ ಬೇಗ ಸಾಯುವಂತೆ ಮಾಡು ಎಂದು 20 ರೂ ನೋಟಿನಲ್ಲಿ ದೇವರಿಗೆ ವಿಚಿತ್ರ ಕೋರಿಕೆ.
ಕಲಬುರಗಿ: ಹುಂಡಿ ಹಣ ಎಣಿಕೆ ವೇಳೆ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ಸಾಲುಗಳನ್ನು ನೋಡಿ ದೇವಸ್ಥಾನದ ಸಿಬ್ಬಂದಿಗಳೇ ತಬ್ಬಿಬಾದ ಘಟನೆ ಕರ್ನಾಟಕದಲ್ಲಿ ನಡೆದಿದೆ. ಕರ್ನಾಟಕದ ಕಲಬುರಗಿ ಜಿಲ್ಲೆ ಅಫಜಲಾಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ಭಕ್ತೆಯೊಬ್ಬರು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದ ನೋಟಿನ ಮೇಲೆ ‘ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹಾಕಿದ್ದಾರೆ. ಇತ್ತೀಚೆಗೆ ದೇಗುಲದ ಹುಂಡಿ ಹಣ ಎಣಿಕೆ ವೇಳೆ ಸಿಬ್ಬಂದಿ ಈ ನೋಟನ್ನು ನೋಡಿ ತಬ್ಬಿಬ್ಬಾಗಿದ್ದಾರೆ. ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ 20 ರೂಪಾಯಿ ನೋಟು ಪತ್ತೆಯಾಗಿದೆ. ನೋಟಿನ ಮೇಲೆ ಬರೆದಿರುವ ಈ ವಾಕ್ಯ ನೋಡಿ ಸಿಬ್ಬಂದಿ ಅಚ್ಚರಿಗೊಂಡರು. ಕೂಡಲೇ ಸಿಬ್ಬಂದಿ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಅಂದಹಾಗೆ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಹುಂಡಿ ಎಣಿಕೆ ನಡೆಯುತ್ತದೆ. ಈ ವರ್ಷ ಹುಂಡಿಯಿಂದ ಸುಮಾರು ರೂ. 60 ಲಕ್ಷ ನಗದು ಹಾಗೂ 1 ಕೆಜಿ ಬೆಳ್ಳಿ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲಕ್ಕೆ ಬರುವ ಕೆಲ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ಅದನ್ನು ಹುಂಡಿಗೆ ಹಾಕುತ್ತಾರೆ. ಇದೇ ರೀತಿ ಸೊಸೆಯೊಬ್ಬರು ತಮ್ಮ ಅತ್ತೆ ಸಾವಿನ ಕೋರಿಕೆ ಕೋರಿ ಹುಂಡಿಗೆ ಹಣ ಹಾಕಿದ್ದಾರೆ.