ಟಾಪ್ 5 ನ್ಯೂಸ್ ಕರ್ನಾಟಕ
– ಮೈಸೂರು: ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
– ಚಿಕ್ಕಬಳ್ಳಾಪುರ:- ಜೆಡಿಎಸ್ ಮುಖಂಡನ ಭೀಕರ ಹತ್ಯೆ
– ವಿಜಯಪುರ :-ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರುಪಾಲು
– ಗದಗ: ಲಾಡ್ಜ್ನಲ್ಲಿ ಇಂಜಿನಿಯರ್ ಆತ್ಮಹತ್ಯೆ
– ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು
NAMMUR EXPRESS NEWS
ಮೈಸೂರು: ಜಿಲ್ಲೆಯ ಹುಣಸೂರಿನ ಬೋಳನಹಳ್ಳಿಯ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥವಾದ ಘಟನೆ ನಡೆದಿದೆ. ಹೊಸ ವರ್ಷದ ದಿನದಂದು ಕೇಕ್ ಕಟ್ ಮಾಡಿ ಉಳಿದಿದ್ದ ಕೇಕ್ ಅನ್ನು ಎರಡು ದಿನದ ನಂತರ ಮಕ್ಕಳು ತಿಂದಿದ್ದಾರೆಂದು ಹೇಳಲಾಗಿದೆ. ಕೇಕ್ ಸೇವಿಸಿದ ನಂತರ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಬೋಳನಹಳ್ಳಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ನಿರ್ಲಕ್ಷ್ಯತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ಅಶ್ವತ್ಥ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
– ಚಿಕ್ಕಬಳ್ಳಾಪುರ:- ಜೆಡಿಎಸ್ ಮುಖಂಡನ ಭೀಕರ ಹತ್ಯೆ
ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡ ಹಾಗೂ ಕೆಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯನ್ನು ರಸ್ತೆ ಮಧ್ಯದಲ್ಲೆ ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ. ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಹತ್ಯೆಗೊಳಗಾದ ವ್ಯಕ್ತಿಯಗಿದ್ದಾರೆ. ಎಂದಿನಂತೆ ವೆಂಕಟೇಶ್ ರಾತ್ರಿ 9 ಗಂಟೆ ಸುಮಾರಿಗೆ ತಮ್ಮನಾಯಕನಹಳ್ಳಿ ಗೇಟ್ನಲ್ಲಿರುವ ಮೆಡಿಕಲ್ ಸ್ಟೋರ್ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಮನೆಯತ್ತ ಸ್ಕೂಟಿ ಮೂಲಕ ಹೊರಟಿದ್ದ ವೆಂಕಟೇಶ್ ಅವರಿಗೆ ಅಡ್ಡ ಬಂದು ಲಾಂಗ್ ಬೀಸಲಾಗಿದೆ. ಪರಿಣಾಮ ಎಡಗೈ ತೋಳಿನ ಭಾಗ ಕಟ್ ಆಗಿ, ಗಾಡಿ ಸಮೇತ ವೆಂಕಟೇಶ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಮನಸ್ಸೋ ಇಚ್ಛೆ ಮುಖ ಹೊಟ್ಟೆ ಭಾಗಕ್ಕೆ ಮಾರಕಾಸ್ತ್ರದಿಂದ ಕೊಚ್ಚಲಾಗಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಸೇರಿದಂತೆ ಸೋಕೋ ತಂಡ ಪರಿಶೀಲನೆ ನಡೆಸಿದೆ.
– ವಿಜಯಪುರ :-ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರುಪಾಲು
ವಿಜಯಪುರ : ನಗರದ ಹೊರ ಭಾಗದಲ್ಲಿರುವ ಬೇಗಂ ತಾಲಾಬ್ ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರಲ್ಲಿ ಮುಳಗಿ ಮೃತಪಟ್ಟಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿರುವ ಕಾರಣ ಸಾರ್ವತ್ರಿಕ ರಜೆ ಘೋಷಣೆ ಹಿನ್ನಲೆ ನಗರದ ಅನಿರುದ್ದ ಸಾಮ್ರಾಣಿ ಹಾಗೂ ಇತರರು ಬೇಗಂ ತಾಲಾಬ್ ಕೆರೆಯ ಬಳಿ ತೆರಳಿದ್ದರು. ಆಗ ಅನಿರುದ್ದ ಸಾಮ್ರಾಣಿ (20) ಈಜಾಡಲು ಕೆರೆಯಲ್ಲಿ ಇಳಿದಿದ್ದಾನೆ. ಆಗ ಜೊತೆಗಿದ್ದ ಅನಿರುದ್ದ ಸಹೋದರ ಅನಿಕೇತ ಸಾಮ್ರಾಣಿ ಹಾಗೂ ಇತರರು ನೀರಿಗೆ ಇಳಿಯಬೇಡಾ ಎಂದು ಹೇಳಿದರೂ ಅನಿರುದ್ದ ಮಾತ್ರ ನೀರಿಗೆ ಇಳಿದಿದ್ದಾನೆ. ಕೆಲ ಕಾಲ ಈಜಾಡಿದ ಬಳಿಕ ನೀರಲ್ಲಿ ಮುಳುಗಿದ್ದಾನೆ. ದಡದಲ್ಲಿದ್ದವರು ಎಷ್ಟೇ ಕೂಗಿ ಕರೆದರೂ ಅನಿರುದ್ದ ಮಾತ್ರ ನೀರಿನಿಂದ ಮೇಲೆ ಏಳಲೇ ಇಲ್ಲವಂತೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದಿ ಅಗ್ನಿಶಾಮಕ ದಳ ಸಿಬ್ಬಂದಿ ಅನಿರುದ್ದ ಶವಕ್ಕಾಗಿ ಶೋಧ ನಡೆಸಿದ್ದರು. ಸ್ಥಳದಲ್ಲಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿತ್ತು.
– ಗದಗ: ಲಾಡ್ಜ್ನಲ್ಲಿ ಇಂಜಿನಿಯರ್ ಆತ್ಮಹತ್ಯೆ
ಗದಗ: ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ.
ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಡಿ. 03ರಂದು ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್ ನಗರದ ಪಲ್ಲವಿ ಲಾಡ್ಜ್ನ ರೂಮ್ ನಂಬರ್ 513ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಗೌಡ ಪಾಟೀಲ್ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದು, ಈ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಮೃತ ಸಹೋದರ ಕೃಷ್ಣಗೌಡ ಪ್ರತಿಕ್ರಿಯಿಸಿದ್ದು, ನೇಣು ಹಾಕಿ ಕೊಲೆ ಮಾಡಿದ್ದಾರೆ. ಸಾಲ ಇಲ್ಲ. ಸಾಕಷ್ಟು ಆಸ್ತಿ ಇದೆ. ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಲ್ಲ. ಸಾಲಕ್ಕೆ ಜಾಮೀನು ಆಗಿದ್ದ ಆ ವಿಷಯಕ್ಕಾದರೂ ಆಗಿರಬಹುದು. ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಪ್ರಮೋಶನಕ್ಕೆನಾದರೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಈ ಮೂರು ವಿಷಯಕ್ಕೆ ಸಾವು ಅಂತ ಅನುಮಾನ ಇದೆ ಎಂದಿದ್ದಾರೆ.
– ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು
ವಿಜಯಪುರ : ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮತ್ತು ಗಂಡು ಮಕ್ಕಳಿಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ. ಗೀತಾ ಬಡಗಿ(28), ಮಕ್ಕಳಾದ ಶ್ರವಣ್(6), ಶರಣ್(4) ನೀರುಪಾಲಾದವರು. ಮೃತ ಗೀತಾ ತಂದೆ ರಾಮಪ್ಪ ನಾಯ್ಕೋಡಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ. ಯಾಳವಾರ ಗ್ರಾಮದ ನಿವಾಸಿ ಶ್ರೀಶೈಲ ಜೊತೆಗೆ ಮದುವೆಯಾಗಿದ್ದ ಗೀತಾ, ಗಂಡನ ಜೊತೆ ಜಗಳವಾಡಿ ತವರು ಮನೆಗೆ ಬಂದಿದ್ದರು. ಈ ವೇಳೆ ಮಕ್ಕಳ ಜತೆ ಕೃಷಿ ಹೊಂಡದ ಬಳಿ ಹೋಗಿದ್ದಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಸದ್ಯ ತಾಯಿ ಮತ್ತು ಗಂಡು ಮಕ್ಕಳಿಬ್ಬರ ಶವಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.